ಬಣ್ಣದ ತಗಡಿನ ತುತ್ತೂರಿ - ಜಿ.ಪಿ.ರಾಜರತ್ನಂ

 

ಬಣ್ಣದ ತಗಡಿನ ತುತ್ತೂರಿ 

ಕಾಸಿಗೆ ಕೊಂಡನು ಕಸ್ತೂರಿ 

ಸರಿಗಮ ಪದನಿಸ ಊದಿದನು 

ಸನಿದಪ ಮಗರಿಸ ಊದಿದನು.



ತನಗೇ ತುತ್ತೂರಿ ಇದೆ ಎಂದ

ಬೇರಾರಿಗೂ ಅದು ಇಲ್ಲೆಂದ 

ಕಸ್ತೂರಿ ನಡೆದನು ಬೀದಿಯಲಿ 

ಜಂಭದ ಕೋಳಿಯ ರೀತಿಯಲಿ.



ತುತ್ತೂರಿ ಊದುತ ಕೊಳದ ಬಳಿ 

ನಡೆದನು ಕಸ್ತೂರಿ ಸಂಜೆಯಲಿ 

ಜಾರಿತು ನೀರಿಗೆ ತುತ್ತೂರಿ 

ಗಂಟಲು ಕಟ್ಟಿತು ನೀರೂರಿ



ಸರಿಗಮ ಊದಲು ನೋಡಿದನು 

ಗ, ಗ, ಗ, ಗ ಸದ್ದನು ಮಾಡಿದನು 

ಬಣ್ಣವು ನೀರಿನ ಪಾಲಾಯ್ತು 

ಬಣ್ಣದ ತುತ್ತೂರಿ ಬೋಳಾಯ್ತು



ತುತ್ತೂರಿ ಬಣ್ಣವು ಹಾಳಾಯ್ತು 

ಜಂಭದ ಕೋಳಿಗೆ ಗೋಳಾಯ್ತು.