ಶೈಕ್ಷಣಿಕ ವರ್ಷದಿಂದ ಪ್ರತೀ ಪಾಠಕ್ಕೂ ಕಿರುಪರೀಕ್ಷೆ - ಪಾಠ ಆಧಾರಿತ ಮೌಲ್ಯಮಾಪನ' (LBA)

 


        ಶಾಲಾ ಮಕ್ಕಳ ಕಲಿಕಾ ಫಲಿತಾಂಶ ಸುಧಾರಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷದಿಂದ 'ಪಾಠ ಆಧಾರಿತ ಮೌಲ್ಯಮಾಪನ' (ಎಲ್‌ಬಿಎ) ಪರಿಚಯಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.


     ರಾಜ್ಯದಲ್ಲಿ ಕಳೆದ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ಈ ವರ್ಷದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಪರೀಕ್ಷಾ ಸುಧಾರಣೆಗಳ ಕ್ರಮದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿತ್ತು.


• 1-10ನೇ ತರಗತಿ ಮಕ್ಕಳಿಗೆ ಪ್ರತಿ ಅಧ್ಯಾಯ ಮುಗಿದ ಬಳಿಕ ಕಿರು ಪರೀಕ್ಷೆ....


       ಶಾಲಾ ಮಕ್ಕಳ ಕಲಿಕೆಯ ಕುರಿತು ನಡೆಸಲಾದ ಹಲವು ಸಮೀಕ್ಷೆಗಳೂ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿ ರುವುದನ್ನು ಎತ್ತಿ ತೋರಿಸಿವೆ. ಈ ಎಲ್ಲ ಕಾರಣಗಳಿಂದ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಮತ್ತು ಕಲಿಕಾ ಫಲಿತಾಂಶ ಸುಧಾರಿಸಲು ಇಲಾಖೆ, 2025-26ರ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್‌ಬಿಎ ನಡೆಸಲು ನಿರ್ಧರಿಸಿದೆ.


      ಡಿಜಿಟಲ್ ತಂತ್ರಜ್ಞಾನದ ಮೂಲಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ಅಭಿವೃದ್ಧಿಪಡಿಸಿರುವ 'ವಿದ್ಯಾ ಸಮೀಕ್ಷಾ ಕೇಂದ್ರ' ಮೊಬೈಲ್ ತಂತ್ರಾಂಶ ಬಳಸಲು ನಿರ್ಧರಿಸಲಾಗಿದೆ.


         ಪ್ರಸ್ತುತ ಶಾಲಾ ಹಂತದಲ್ಲಿಯೇ ಶಾಲಾ ಮಕ್ಕಳಿಗೆ ವಾರ್ಷಿಕವಾಗಿ ನಾಲ್ಕು ರಚನಾತ್ಮಕ ಮೌಲ್ಯಮಾಪನ (ಕಿರು ಪರೀಕ್ಷೆ) ಮತ್ತು ಎರಡು ಸಂಕಲನಾತ್ಮಕ ಮೌಲ್ಯಮಾಪನ (ಅರ್ಧವಾರ್ಷಿಕ, ವಾರ್ಷಿಕ) ನಡೆಸಲಾಗುತ್ತಿದೆ. ಆದರೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಮಕ್ಕಳ ಕಲಿಕಾ ನ್ಯೂನತೆ ಗುರುತಿಸುವಲ್ಲಿ ವಿಫಲವಾಗಿವೆ.


       ಹೇಗಿರಲಿದೆ ಹೊಸ ನಿಯಮ?: ಪರೀಕ್ಷೆಯಲ್ಲಿ ಸಣ್ಣ ಪ್ರಶ್ನೆಗಳು, ಬಿಟ್ಟಸ್ಥಳ ತುಂಬಿ, ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳು ಹಾಗೂ ಬಹು ಆಯ್ಕೆಯ ಪ್ರಶ್ನೆಗಳ (ಎಂಸಿಕ್ಯು) ಆಧಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಉಚಿತವಾಗಿ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಮೊಬೈಲ್ ತಂತ್ರಾಂಶದ ಮೂಲಕ ಉತ್ತರ ಪತ್ರಿಕೆ ಸ್ಕ್ಯಾನ್ ಮಾಡಿದರೆ, ತಕ್ಷಣವೇ ಮೌಲ್ಯಮಾಪನ ಮಾಡಿ ಅಂಕಗಳನ್ನು ಪ್ರದರ್ಶಿಸುತ್ತದೆ.


        ಸಂಬಂಧಪಟ್ಟ ಪಾಠದಲ್ಲಿ ವಿಷಯವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಮತ್ತು ಪಾಠದ ಉದ್ದೇಶಗಳನ್ನು ಸಾಧಿಸಲಾಗಿದೆಯೇ ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಮಕ್ಕಳು ಪಾಠಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ತಪ್ಪುಗ್ರಹಿಕೆಯನ್ನು ಪರಿಹರಿಸಲು ಮತ್ತು ವಿಷಯಗಳನ್ನು ಗಮನಿಸಲು ಸಹಾಯ ಮಾಡುತ್ತದೆ.