ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ || ಸದಾ ||
ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?
ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ
ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ || ಸದಾ ||
ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ
ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ,
ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ || ಸದಾ ||
ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ
ಪ್ರಾಣವನ್ನೆ ಪಗಡೆಯಾಡಿದವರಿಗೆಮ್ಮ ನಮನ,
ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ || ಸದಾ ||
ಕೃತಿಕಾರರ ಪರಿಚಯ – ಕೆ. ಎಸ್. ನಿಸಾರ್ ಅಹಮ್ಮದ್
ಕವಿ ಕೊಕ್ಕರೆಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮ್ಮದ್ ಅವರು 05-02-1936 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ಭೂಗರ್ಭಶಾಸ್ತ್ರದಲ್ಲಿ ಪದವಿಯನ್ನು ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಇವರು ಮನಸು ಗಾಂಧಿಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ, ಸುಮೂರ್ತ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.