🔥 *ಶಿಕ್ಷಕರ ಹಿಂಭಡ್ತಿ ಹಾಗೂ ಖಾಲಿ ಹುದ್ದೆ ಕನ್ನಡ ಶಾಲೆಗಳಿಗೆ ಮಾರಕ* 🔥
---
ನಿರಂಜನಾರಾಧ್ಯ ವಿ.ಪಿ.
ಅಭಿವೃದ್ಧಿ ಶಿಕ್ಷಣ ತಜ್ಞ.
ಕರ್ನಾಟಕ ಸರಕಾರ ಸಾರ್ವಜನಿಕ
ಶಿಕ್ಷಣ ಇಲಾಖೆ ಸೇವಾ ನಿಯಮಗಳ
ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾ ಬಂದಿದೆ. ಪ್ರಾರಂಭದಲ್ಲಿ ೧ರಿಂದ ೪ನೇ ತರಗತಿಗಳನ್ನು (ಈಗ ೧ರಿಂದ ೫) ಹೊಂದಿದ್ದ ಕಿರಿಯ ಪ್ರಾಥಮಿಕ ಶಾಲೆ ಮತ್ತು ೧ರಿಂದ ೭ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಶಿಕ್ಷಕರು ಕಲಿಸುತ್ತಾ ಬಂದಿದ್ದಾರೆ. ನೇಮಕಾತಿ ಮತ್ತು ಕಾರ್ಯನಿರ್ವಹಿಸಿದ ಆಧಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ, ೧ರಿಂದ ೭ನೇ ತರಗತಿಯವರೆಗೆ ಕಲಿಸುವ ಶಿಕ್ಷಕರಾಗಿರುತ್ತಾರೆ. ಕಾಲದಿಂದ ಕಾಲಕ್ಕೆ ಅವರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಹತೆ ಮತ್ತು ನೇಮಕಾತಿ ನಿಯಮಗಳ ಅನ್ವಯವೇ ನೇಮಿಸಿಕೊಳ್ಳಲಾಗಿದೆ. ಉದಾಹರಣೆಗೆ, ಸ್ವಾತಂತ್ರ್ಯಾನಂತರ ಪ್ರಾರಂಭದಲ್ಲಿ ಮೈಸೂರು ರಾಜ್ಯವು ಪೂರ್ಣ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿ ಕಲಿತವರನ್ನು ಮತ್ತು ಮಾಧ್ಯಮಿಕ ಶಾಲೆಯಲ್ಲಿ ೮ನೇ ತರಗತಿ (ಲೋವರ್ ಸೆಕೆಂಡರಿ) ಮುಗಿಸಿದ ಅಭ್ಯರ್ಥಿಗಳನ್ನು ಶಾಲಾ ಶಿಕ್ಷಕರನ್ನಾಗಿ ನೇಮಿಸಿಕೊಂಡು, ಅನಂತರ ಅವರಿಗೆ ಲೋವರ್ ಟೀಚರ್ ಸರ್ಟಿಫಿಕೇಟ್ (ಟಿಎಸ್ಎಲ್) ಮತ್ತು ಹೈಯರ್ ಟೀಚರ್ ಸರ್ಟಿಫಿಕೇಟ್ (ಟಿಸಿಹೆಚ್) ಶಿಕ್ಷಕರ ತರಬೇತಿಗಳನ್ನು ಪಡೆಯಲು ನಿಯೋಜಿಸುತ್ತಿತ್ತು. ಈ ರೀತಿ ಕೆಲಸಕ್ಕೆ ಸೇರಿದ ಶಿಕ್ಷಕರು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ೧ರಿಂದ ೭/೮ನೇ ತರಗತಿಯ ಮಕ್ಕಳಿಗೆ ಎಲ್ಲ ವಿಷಯಗಳನ್ನೂ ಕಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್, ಶಿಕ್ಷಕ, ಸರಕಾರಿ ನೌಕರರಾಗಿ ಉನ್ನತ ಹುದ್ದೆಗಳಲ್ಲಿ ಇಂದು ಕೆಲಸ ನಿರ್ವಹಿಸುತ್ತಿದ್ದಾರೆ.
ಅನಂತರ, ಕಾಲಕಾಲಕ್ಕೆ ಬದಲಾದ ನಿಯಮಗಳ ಅನ್ವಯ ಎಸೆಸೆಲ್ಸಿ-ಟಿಸಿಹೆಚ್, ಪಿಯುಸಿ-ಡಿಎಡ್ ಮತ್ತು ಪದವಿ -ಬಿಎಡ್ ವಿದ್ಯಾರ್ಹತೆಗಳನ್ನು ಶಿಕ್ಷಕರ ನೇಮಕಾತಿಗೆ ಸರಕಾರ ಅನುಸರಿಸುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ನೀತಿಯಲ್ಲಿನ ಬದಲಾವಣೆ ಸ್ವಾಗತಾರ್ಹ. ಆದರೆ, ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಬದಲಾದ ಯಾವುದೇ ಕಾನೂನು-ನೀತಿ-ನಿಯಮಗಳನ್ನು ಪೂರ್ವಾನ್ವಯಗೊಳಿಸಿ ಶಿಕ್ಷಕರ ಘನತೆ ಅಥವಾ ವೃತ್ತಿ ಗೌರವಕ್ಕೆ ಧಕ್ಕೆ ತರುವ ಮೂಲಕ ಶಾಲಾ ಹಂತದಲ್ಲಿ ಮಕ್ಕಳ ಶಿಕ್ಷಣಕ್ಕೆ ಸರಕಾರವೇ ಅಡ್ಡಿಯಾಗಿದ್ದ ಉದಾಹರಣೆಗಳಿಲ್ಲ. ಬದಲಿಗೆ, ತರಬೇತಿ ಹೊಂದಿಲ್ಲದ ಶಿಕ್ಷಕರನ್ನು ಸರಕಾರ ತನ್ನದೇ ಖರ್ಚಿನಲ್ಲಿ ತರಬೇತಿಗೆ ನಿಯೋಜನೆ ಮಾಡಿದ್ದು ಹಾಗೂ ಸೇವಾ ಜೇಷ್ಠತೆ ಮತ್ತು ಸೇವಾ ಅವಧಿಯಲ್ಲಿ ಪಡೆದ ಹೆಚ್ಚಿನ ವಿದ್ಯಾರ್ಹತೆಗಳನ್ನು ಪರಿಗಣಿಸಿ ಅವರಿಗೆ ಮುಂಭಡ್ತಿಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸಿದ ಬಗ್ಗೆ ಹಲವು ಉದಾಹರಣೆಗಳಿವೆ.
ಶಿಕ್ಷಕರ ನೇಮಕಾತಿ ಮತ್ತು ವೃತ್ತಿ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದ್ದ ಕರ್ನಾಟಕದ ಪರಂಪರೆಯನ್ನು ಸರಕಾರ ಪಲ್ಲಟಗೊಳಿಸಿದೆ. ಸರಕಾರ ದಿನಾಂಕ ೧೯.೫.೨೦೧೭ರಲ್ಲಿ ಹೊರಡಿಸಿ ಇತ್ತೀಚೆಗೆ ಜಾರಿಗೊಳಿಸಿದ ಅವೈಜ್ಞಾನಿಕ, ಕಾನೂನು ಬಾಹಿರ ಮತ್ತು ಕನಿಷ್ಠ ವಿವೇಚನೆಯೂ ಇಲ್ಲದ ಆದೇಶ, ಈ ಹಿಂದೆ ೧ರಿಂದ ೭/೮ನೇ ತರಗತಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾಗಿದ್ದ ಸರಿಸುಮಾರು ೧,೦೮,೯೧೫ ಶಿಕ್ಷಕರನ್ನು ಏಕಾಏಕಿಯಾಗಿ ಪುನರ್ವಿಂಗಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರೆಂದು (೧ರಿಂದ ೫ನೇ ತರಗತಿ) ಮರು ಪದನಾಮಕರಿಸಿ ಹಿಂಭಡ್ತಿಗೊಳಿಸುವ ಮೂಲಕ ಕನ್ನಡ ಶಾಲೆಗಳಲ್ಲಿ ಕಲಿಕೆಯನ್ನು ಅಸ್ಥಿರಗೊಳಿಸಿದೆ. ಈ ಆಘಾತ, ಅವಮಾನ, ನೋವು ಮತ್ತು ಮಾನಸಿಕ ಹಿಂಸೆಯಿಂದ ಶಿಕ್ಷಕರು ಕಲಿಕೆಯಲ್ಲಿ ಪೂರ್ಣ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ತಮ್ಮ ವೃತ್ತಿಯಲ್ಲಿ ಶಾಂತಿ, ನೆಮ್ಮದಿ ಮತ್ತು ಲವಲವಿಕೆಯಿಲ್ಲದ ಶಿಕ್ಷಕರು ಏನು ತಾನೇ ಕಲಿಸಲು ಸಾಧ್ಯವೆಂಬುದು ಮೂಲಭೂತ ಪ್ರಶ್ನೆಯಾಗಿದೆ!
ಒಂದು ವ್ಯವಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟ ಅಲ್ಲಿನ ಶಿಕ್ಷಕರ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಸರಕಾರ ತೀರ್ಮಾನಗಳನ್ನು ಕೈಗೊಳ್ಳುವಾಗ ಕನಿಷ್ಠ ವಿವೇಚನೆ ಬಳಸದೆ ತೀರ್ಮಾನಗಳನ್ನು ಕೈಗೊಂಡರೆ ಅದು ಹೇಗೆ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಪ್ರಭಾವಿಸುತ್ತದೆ ಎಂಬುದಕ್ಕೆ ಸರಕಾರದ ಹಿಂಭಡ್ತಿ ತೀರ್ಮಾನದ ಆದೇಶ ಒಂದು ಜ್ವಲಂತ ಉದಾಹರಣೆ. ಇದು ಲಕ್ಷಾಂತರ ಶಿಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕ್ಷಕಿಯರಿಗಾದ ದೊಡ್ಡ ಅನ್ಯಾಯ.
ಸರಕಾರದ ಈ ಅವೈಜ್ಞಾನಿಕ ತೀರ್ಮಾನ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇತರ ವೃಂದಗಳ ಮುಂಭಡ್ತಿಗೆ ಸಂಬಂಧಿಸಿದಂತೆ ಜಾರಿಯಿರುವ ಸೇವಾ ನಿಯಮಗಳು ಶಿಕ್ಷಕರಿಗೇಕಿಲ್ಲ ಎಂಬ ಚರ್ಚೆಯನ್ನು ಹುಟ್ಟು ಹಾಕುತ್ತದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಶಿಕ್ಷಣ ಇಲಾಖೆಯಲ್ಲಿ ಎರಡನೇ ದರ್ಜೆಯ ಗುಮಾಸ್ತರಾಗಿ ಕೆಲಸಕ್ಕೆ ಸೇರುವ ನೌಕರರು ಅನಂತರ ಮುಂಭಡ್ತಿ ಮೂಲಕ ಮೊದಲನೇ ದರ್ಜೆ ಗುಮಾಸ್ತ, ಅಧೀಕ್ಷಕ ಮತ್ತು ಗೆಜೆಟೆಡ್ ಸಹಾಯಕ ಅಧಿಕಾರಿಯಾಗಿ ನಿವೃತ್ತಿಯಾಗುತ್ತಾರೆ. ಕೆಪಿಎಸ್‌ಸಿ ಮೂಲಕ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿದ ಇಲಾಖೆಯ ನೌಕರರು ಬಿಇಒ, ಡಿಡಿಪಿಐ, ಜೆಡಿಪಿಐ ಮತ್ತು ರಾಜ್ಯ ನಿರ್ದೇಶಕರಾಗಿ ಸೇವೆಯಲ್ಲಿದ್ದಾರೆ, ಕೆಲವರು ನಿವೃತ್ತಿ ಹೊಂದಿದ್ದಾರೆ.
ಇನ್ನು ಸಹಾಯಕ ಆಯುಕ್ತರಾಗಿ ಸೇವೆಗೆ ಸೇರುವ ಐಎಎಸ್ ಅಧಿಕಾರಿ ಡೆಪ್ಯುಟಿ ಕಮೀಷನರ್, ನಿರ್ದೇಶಕ, ಕಾರ್ಯಕಾರಿ
ನಿರ್ದೇಶಕ, ಆಯುಕ್ತ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಂತಿಮವಾಗಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದುತ್ತಾರೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಸಹ-ಶಿಕ್ಷಕರಾಗಿ ಸೇವೆಗೆ ಸೇರುವ ಶಿಕ್ಷಕ ಸಹ-ಶಿಕ್ಷಕನಾಗಿಯೇ ನಿವೃತ್ತಿ ಹೊಂದುವುದು ನಾವು ಆ ಹುದ್ದೆಗೆ ನೀಡುತ್ತಿರುವ ಗೌರವದ ಮಹತ್ವವನ್ನು ಸೂಚಿಸುತ್ತದೆ.
ಮೇ ೨೦೧೭ಕ್ಕೆ ಮುನ್ನ ಸಹ-ಶಿಕ್ಷಕರಾಗಿ ಸೇವೆಗೆ ಸೇರಿದ ಶಿಕ್ಷಕರು ತಮ್ಮ ನೇಮಕಾತಿಯ ಒಪ್ಪಂದದಂತೆ ೧ರಿಂದ ೭ನೇ ತರಗತಿಯವರೆಗೆ ಪಾಠ ಮಾಡುವ ಪ್ರಾಥಮಿಕ ಶಿಕ್ಷಕರಾಗಿದ್ದರು. ಈ ಮೂಲ ನೇಮಕಾತಿ ಒಪ್ಪಂದವನ್ನೇ ಮುರಿದು ಅವರನ್ನು ಕೇವಲ ೧ರಿಂದ ೫ನೇ ತರಗತಿಗೆ ಪಾಠ ಮಾಡಲು ಮರುಪದನಾಮಿಕರಿಸುವ ಸರಕಾರದ ಅದೇಶ ಸಹಜ ನ್ಯಾಯ ಮತ್ತು ಮೂಲ ಒಪ್ಪಂದದ ಉಲ್ಲಂಘನೆಯಾಗಿದೆ. ಯಾವುದೇ ಹೊಸ ನಿಯಮ ಅಥವಾ ಆದೇಶಗಳನ್ನು ಪೂರ್ವಾನ್ವಯ ಗೊಳಿಸುವುದು ಕಾನೂನಿನ ಉಲ್ಲಂಘನೆ ಎಂಬ ಕನಿಷ್ಠ ತಿಳಿವಳಿಕೆ ನೀತಿನಿರೂಪಕರಿಗಿಲ್ಲವಾಗಿದೆ.
ಮತ್ತೊಂದೆಡೆ, ರಾಜ್ಯದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆಯ ೨೦೨೪-೨೫ನೇ ಸಾಲಿನ ಅಂಕಿ-ಅಂಶಗಳ ಅನ್ವಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಟ್ಟು ಮುಂಜೂರಾದ ಶಿಕ್ಷಕರ ಹುದ್ದೆಗಳು ೧,೮೬,೯೯೩. ಆದರೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ೧,೪೪,೭೪೭. ಸರಿ ಸುಮಾರು ೪೩,೨೪೬ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ
೫ ಜಿಲ್ಲೆಗಳೆಂದರೆ ರಾಯಚೂರು, ಚಿಕ್ಕೋಡಿ, ಕಲಬುರ್ಗಿ, ಕೊಪ್ಪಳ ಮತ್ತು ಬಳ್ಳಾರಿ. ಈ ಐದು ಜಿಲ್ಲೆಗಳಲ್ಲಿ ಸರಾಸರಿ ಶೇ. ೩೫.೭ರಷ್ಟು ಹುದ್ದೆಗಳು ಖಾಲಿ ಇವೆ. (ಈ ವಿವರಗಳನ್ನು ಕೋಷ್ಠಕದಲ್ಲಿ ನೀಡಲಾಗಿದೆ).
ಈ ಐದು ಜಿಲ್ಲೆಗಳಲ್ಲಿ ಮುಂಜೂರಾಗಿರುವ ಹುದ್ದೆಗಳು ೩೮,೩೨೦. ಆದರೆ ಇರುವ ಹುದ್ದೆಗಳು ೧೩,೩೦೨. ಈ ಜಿಲ್ಲೆಗಳಲ್ಲಿ ಸರಾಸರಿ ಶೇ. ೩೫.೭ರಷ್ಟು ಹುದ್ದೆಗಳು ಖಾಲಿ ಇವೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಸಂಖ್ಯೆ ೧೦,೭೪೭, ಅಂದರೆ, ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಕನಿಷ್ಠ ಅತಿಥಿ ಶಿಕ್ಷಕರನ್ನೂ ಕೂಡ ಒದಗಿಸಿಲ್ಲ.
ಮತ್ತೊಂದೆಡೆ, ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿ ದುರ್ಬಲಗೊಳಿಸಿದೆ. ೨೦೨೪-೨೫ ನೇ ಸಾಲಿನಲ್ಲಿ ರಾಜ್ಯದಲ್ಲಿ ೩೪,೧೯೨ ಅತಿಥಿ ಶಿಕ್ಷಕರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಅಥವಾ ಕನಿಷ್ಠ ಗೌರವವೂ ಸಿಗುತ್ತಿಲ್ಲ. ಒಮ್ಮೊಮ್ಮೆ ೪-೫ ತಿಂಗಳಾದರೂ ಅವರಿಗೆ ಸಿಗಬೇಕಾದ ಗೌರವಧನವೂ ಸಿಕ್ಕಿರುವುದಿಲ್ಲ.
ಒಟ್ಟಾರೆ, ೧ ರಿಂದ ೭ನೇ ತರಗತಿಗೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೧ರಿಂದ ೫ನೇ ತರಗತಿಗೆ ಸೀಮಿತಗೊಳಿಸುವ ಮೂಲಕ ಹಿಂಭಡ್ತಿ, ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ಅವರಿಗೆ ನೀಡುತ್ತಿರುವ ಗೌರವಧನ, ಹಲವು ವರ್ಷಗಳಿ೦ದ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸದಿರುವಂತಹ ಹಲವಾರು ಸಮಸ್ಯೆಗಳು ಶಿಕ್ಷಕರ ಉತ್ಸಾಹವನ್ನು ಕುಗ್ಗಿಸಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ರಾಜ್ಯ ಸರಕಾರ ಶಿಕ್ಷಕರ ನೇಮಕಾತಿ, ವರ್ಗಾವಣೆ,
ಮುಂಭಡ್ತಿ ಮತ್ತು ಸೇವಾಭದ್ರತೆ ವಿಷಯದಲ್ಲಿ ಕೈಗೊಳ್ಳುತ್ತಿರುವ ನೀತಿ-ನಿಯಮಗಳು ಸಾಕಷ್ಟು ಗೊಂದಲ ಹಾಗೂ ನ್ಯೂನತೆಗಳಿಂದ ಕೂಡಿದ್ದು, ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ನನೆಗುದಿಗೆ ಬಿದ್ದಿದೆ.
ಮೈಸೂರು ರಾಜ್ಯವು 'ಕರ್ನಾಟಕ'ವೆಂದು ನಾಮಕರಣಗೊಂಡು ೫೦ ವರ್ಷಗಳು ತುಂಬಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಕನ್ನಡ ಶಾಲೆಗಳಿಗೆ ಮತ್ತು ಅಲ್ಲಿ ಕಲಿಸುತ್ತಿರುವ ಶಿಕ್ಷಕರಿಗೆ ಬಂದೊದಗಿರುವ ಈ ಪರಿಸ್ಥಿತಿ ಸುವರ್ಣ ಮಹೋತ್ಸವಾಚರಣೆ ತನ್ನ ಚಿನ್ನದ ಹೊಳಪನ್ನು ಕಳೆದುಕೊಳ್ಳುವಂತೆ ಮಾಡಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.