ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - ಸಮೀಕ್ಷೆಯ ಆನ್ ಲೈನ್ ಲಿಂಕ್

 


     ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸುವ ಮೂಲಕ ತಮ್ಮ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ತಾವೇ ಖುದ್ದಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷಕರು ತಮ್ಮ ಮನೆಗೆ ಭೇಟಿ ನೀಡದಿದ್ದರೆ ಅಥವಾ ಸಮೀಕ್ಷಕರು ಭೇಟಿ ನೀಡುವ ಸಮಯಕ್ಕೆ ತಾವು ಮನೆಯಲ್ಲಿರುವುದಿಲ್ಲ ಎನಿಸಿದರೆ ಇಲ್ಲವೇ ಸಮೀಕ್ಷಕರ ಬಳಿ ಮಾಹಿತಿ ಹಂಚಿಕೊಳ್ಳುವುದಕ್ಕಿಂತ ಸ್ವಯಂ ಮಾಹಿತಿ ದಾಖಲಿಸಿಕೊಳ್ಳುವುದು ಸೂಕ್ತವೆನಿಸಿದರಿಗೆ ಆಯೋಗವು ಸ್ವಯಂ ಮಾಹಿತಿ ದಾಖಲಿಸಿಕೊಳ್ಳಲು ಅವಕಾಶ ನೀಡಿದೆ. ಸ್ಮಾರ್ಟ್‌ ಫೋನ್, ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬ್ರೌಸರ್‌ನಲ್ಲಿ ಈ ಪೋರ್ಟಲ್ ಮೂಲಕ ಮಾಹಿತಿ ದಾಖಲಿಸಬಹುದಾಗಿದೆ.



▪️ಸ್ವಯಂ ಮಾಹಿತಿ ದಾಖಲೀಕರಣ ಹೇಗೆ?


▪️ಮೊದಲಿಗೆ https://kscbcselfdeclaration.karnataka.gov.in/ ಲಿಂಕ್ ಕ್ಲಿಕ್ ಮಾಡಿದರೆ ಸಮೀಕ್ಷೆಗಾಗಿ ದಯವಿಟ್ಟು 'ಸ್ಥಳ ಪ್ರವೇಶವನ್ನು ಸಕ್ರಿಯಗೊಳಿಸಿ' ಅಥವಾ 'ಅಲೋ ಲೋಕೇಷನ್' ಎಂಬ ಆಯ್ಕೆ ಬರಲಿದೆ. ಅದನ್ನು ಕ್ಲಿಕ್ ಮಾಡ ಬೇಕು. ಬಳಿಕ ಬಿಬಿಎಂಪಿ ಪ್ರದೇಶ / ಬೆಂಗಳೂರು ಮಹಾನಗರ ಪಾಲಿಕೆ, ಉಳಿದ/ ಇತರೆ ಜಿಲ್ಲೆಗಳು, ಸಮೀಕ್ಷೆದಾರ, ನಾಗರಿಕ ಎಂಬ ಆಯ್ಕೆಗಳು ಬರಲಿದ್ದು, ಸೂಕ್ತ 'ಪ್ರದೇಶ' ದಾಖಲಿಸುವ ಜತೆಗೆ 'ನಾಗರಿಕ' ಎಂಬುದನ್ನು ಆಯ್ಕೆಮಾಡಬೇಕು.


▪️ಒಟಿಪಿ ನಮೂದಿಸಬೇಕು:


    ' ನಾಗರಿಕ' ಎಂಬ ಆಯ್ಕೆ ಬಳಿಕ ಮೊಬೈಲ್ ಸಂಖ್ಯೆ ನಮೂದಿಸುವಂತೆ ಸೂಚನೆ ಬರಲಿದೆ. ಮೊಬೈಲ್ ಸಂಖ್ಯೆ ನಮೂದಿಸಿದ ನಂತರ ಅದಕ್ಕೆ ರವಾನೆಯಾಗುವ ಒಟಿಪಿ ಸಂಖ್ಯೆ ನಮೂದಿಸಬೇಕು. ಬಳಿಕ ಪೂರ್ಣಗೊಂಡಿದೆ. ಬಾಕಿ ಇದೆ ಹಾಗೂ ಕುಟುಂಬದ ವಿವರಗಳು (ಇನ್ನೂ ಯಾವುದೇ ಕುಟುಂಬದ ಸದಸ್ಯರನ್ನು ಸೇರಿಸಿಲ್ಲ) ಎಂಬ ಆಯ್ಕೆಗಳು ಬರಲಿದ್ದು ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸೂಚನೆ ಬರಲಿದೆ 'ಹೊಸ ಸಮೀಕ್ಷೆ ಆರಂಭಿಸಿ' ಎಂಬ ಆಯ್ಕೆ ಕ್ಲಿಕ್ ಮಾಡಬೇಕು.


        ಆಯ್ಕೆ ಕ್ಲಿಕ್ ಮಾಡಿದ ಬಳಿಕ ಯುಎಚ್ ಐಡಿ ಸಂಖ್ಯೆ ಇದೆ/ಇಲ್ಲ ಎಂಬ ಆಯ್ಕೆ ಬರಲಿದೆ. ಸಮೀಕ್ಷಾ ಪೂರ್ವದಲ್ಲಿ ಎಸ್ಕಾಂಗಳ ಮೀಟರ್ ರೀಡರ್‌ಗಳು ಯುಎಚ್ ಐಡಿ ಸಂಖ್ಯೆ ಇರುವ ಚೀಟಿ ಅಂಟಿಸಿರುತ್ತಾರೆ. ಒಂದೊಮ್ಮೆ ಯುಎಚ್‌ ಐಡಿ ಸಂಖ್ಯೆಯಿರುವ ಸ್ಟಿಕ್ಟರ್‌ ಅಂಟಿಸದಿದ್ದರೆ ಮನೆಯ ವಿದ್ಯುತ್ ಮೀಟರ್‌ನ ಖಾತೆ ಸಂಖ್ಯೆ (ಆ‌ರ್.ಆ‌ರ್.ಸಂಖ್ಯೆ ) ನಮೂದಿಸಿ, ಸಮೀಕ್ಷೆ ಮುಂದುವರಿಸಬಹುದು.


▪️ಫೋಟೊ ಅಪ್‌ ಲೋಡ್ ಮಾಡಬೇಕು:


     ಸಮೀಕ್ಷೆಯಡಿ ಮಾಹಿತಿ ಒದಗಿಸುವ ವ್ಯಕ್ತಿಯ ಫೋಟೊ ಅಪ್ ಲೋಡ್ ಮಾಡಬೇಕು. ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ ಸಂಖ್ಯೆ ನಮೂದಿಸಬೇಕು. ಹಾಗೆಯೇ ಕುಟುಂಬದ ಸದಸ್ಯರ ವಿವರ ದಾಖಲಿಸಬೇಕು. ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಇಲ್ಲದೇ ಇದ್ದರೆ, ಅವರ ಆಧಾರ್‌ಸಂಖ್ಯೆ ನಮೂದಿಸಿ ಅವರ ಹೆಸರನ್ನೂ ಸೇರಿಸಬಹುದು.



     ಆಧಾ‌ರ್ ಸಂಖ್ಯೆ ದಾಖಲಿಸುವ ಹಂತದಲ್ಲಿ ಕುಟುಂಬ ಮುಖ್ಯಸ್ಥರ ಇ-ಕೆವೈಸಿ ದೃಢೀಕರಣ ಅಗತ್ಯ. ಅದಕ್ಕಾಗಿ ಆಧಾರ್ ಸಂಖ್ಯೆ ಜತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ನಮೂದಿಸಿದ ನಂತರ 'ಇ-ಕೆವೈಸಿ' ದೃಢೀಕರಣ ಮುಗಿಯಲಿದೆ.


▪️ನಾನಾ ವಿವರ ದಾಖಲಿಸುವ ಆಯ್ಕೆ:


    ಕುಟುಂಬದ ಸದಸ್ಯರ ಹೆಸರು ಸೇರಿಸಿದ ನಂತರ ಧರ್ಮ, ಜಾತಿ, ಉಪಜಾತಿ, ಶೈಕ್ಷಣಿಕ, ಔದ್ಯೋಗಿಕ, ಆದಾಯ, ಕುಲಕಸುಬು, ಆರೋಗ್ಯ ವಿಮೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರ ದಾಖಲಿಸಬೇಕು. ಎಲ್ಲವೂ ಪೂರ್ಣಗೊಂಡ ನಂತರ, ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡ ಬಳಿಕ ಸಲ್ಲಿಸಿ' ಆಯ್ಕೆಮಾಡಿಕೊಂಡರೆ ಮಾಹಿತಿ ದಾಖಲೀಕರಣ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.



▪️ಸ್ವಯಂ ಘೋಷಣಾ ಪತ್ರ:


    ದತ್ತಾಂಶ ದಾಖಲೀಕರಣ ಮುಗಿಯುವ ಹಂತದಲ್ಲಿ 'ಸ್ವಯಂ ಘೋಷಣಾ ಪತ್ರ'ವನ್ನು ಅಪ್ ಲೋಡ್ ಮಾಡಬೇಕು. ಬಿಳಿ ಹಾಳೆಯಲ್ಲಿ 'ನಾನು ಈ ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಯಾಗಿದ್ದೇನೆ ಮತ್ತು ನೀಡಿರುವ ಎಲ್ಲ ಮಾಹಿತಿ ನಿಜ ಮತ್ತು ಸರಿಯಾಗಿದೆ' ಎಂದು ಬರೆದು ಸಹಿ ಮಾಡಬೇಕು. ಅದನ್ನು ಫೋಟೊ ತೆಗೆದು, ಅಪ್ ಲೋಡ್ ಮಾಡಬೇಕು. ಈ ಎಲ್ಲ ಪ್ರಕ್ರಿಯೆಯ ನಂತರ 'ಸಮೀಕ್ಷೆ ಪೂರ್ಣಗೊಂಡಿದೆ' ಎಂಬ ಸಂದೇಶ ರವಾನೆಯಾಗಲಿದೆ.



▪️ಈ ದಾಖಲೆಗಳಿರಲಿ:


     ಮನೆಯ ವಿದ್ಯುತ್ ಮೀಟರ್‌ನ ಖಾತೆ ಸಂಖ್ಯೆ. ಪಡಿತರ ಚೀಟಿಯ ಸಂಖ್ಯೆ. ಆಧಾ‌ರ್ ಸಂಖ್ಯೆ ಮತ್ತು ಅದಕ್ಕೆ ಜೋಡಣೆ ಮಾಡಿರುವ ಮೊಬೈಲ್ ಸಂಖ್ಯೆ. ಕುಟುಂಬದ ಸದಸ್ಯರ ಶೈಕ್ಷಣಿಕ ಮತ್ತು ಆರ್ಥಿಕ ವಿವರ.




CLICK HERE FOR ONLINE LINK