ನಿನ್ನ ಪ್ರೀತಿಗೆ, ಅದರ ರೀತಿಗೆ - ಸಿ. ಅಶ್ವಥ್

ಸಾಹಿತ್ಯ:-ಕೆ.ಎಸ್.ನರಸಿಂಹಸ್ವಾಮಿ

ಸಂಗೀತ/ಗಾಯನ:-ಸಿ. ಅಶ್ವಥ್


ನಿನ್ನ ಪ್ರೀತಿಗೆ, ಅದರ ರೀತಿಗೆ

ಕಣ್ಣ ಹನಿಗಳೆ ಕಾಣಿಕೆ 

ಹೊನ್ನ ಚಂದಿರ, ನೀಲಿ ತಾರೆಗೆ

ಹೊಂದಲಾರದ ಹೋಲಿಕೆ.|| 


ನಿನ್ನ ಪ್ರೀತಿಗೆ, ಅದರ ರೀತಿಗೆ

ಚೆಲುವು ಕನಸಿನ ಜವನಿಕೆ ;

ಬೆಳ್ಳಿನಿದ್ದೆಯ ತುಟಿಗಳಂಚಿಗೆ

ಸುಳಿವ ಕಿರುನಗೆ ತೋರಿಕೆ.|| 


ತುಂಬಿ ಕೊರೆದಿಹ ಹೂವಿನೆದೆಯಲಿ

ನೋವು ಗಾಳಿಗೆ ಹಾಸಿಗೆ ;

ಜೇನು ಜೀವದ ನೆಳಲ ಪೊದೆಯಲಿ

ಗೂಡುಕಟ್ಟಿದೆ ಆಸೆಗೆ.|| 


ತಂತಿ ಆಚೆಗೆ ವೀಣೆ ಮಿಂಚಿದೆ

ಬೆಂಕಿಬೆರಳಿನ ಹಾಡಿಗೆ ;

ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ

ಚಿಂತೆಯಾಳುವ ಕಾಡಿಗೆ.|| 


ನಗುವ ಮುಖಗಳ ನೋಡಿಬಂದೆನು

ಹಾದಿ ಬೀದಿಯ ಕೆಲದಲಿ ;

ನಗದ ಒಂದೇ ಮುಖವ ಕಂಡೆನು

ನನ್ನ ಮನೆಯಂಗಳದಲಿ.|| 


ನಗೆದ ಮುಖದಲಿ ನಿನ್ನ ಕಂಡೆನು

ತಿಳಿದ ಬಾನಿನ ಹರಹನು,

ಮೊದಲ ಮೋಹದ ಮಂಜು ಕದಲಲು

ಬದುಕು ತುಂಬಿದ ಹಗಲನು.ll 


ನಿನ್ನ ಪ್ರೀತಿಗೆ, ಅದರ ರೀತಿಗೆ

ನೀಡಬಲ್ಲೆನೆ ಕಾಣಿಕೆ 

ಕಾಲವಳಿಸದ ನೆಲದ ಚೆಲುವಿಗೆ

ನಿನ್ನ ಪ್ರೀತಿಯೆ ಹೋಲಿಕೆ.||