ಸಾಹಿತ್ಯ ಮತ್ತು ಸಂಗೀತ: ಉಪಾಸನಾ ಮೋಹನ್
ಗಾಯನ: ಎನ್. ಅಪರ್ಣ, ಕಾವ್ಯ ಫಾಲಚಂದ್ರ
ಸಂಕ್ರಾಂತಿಯ ಹೊಸ ವರುಷದ ಹಬ್ಬ
ನಾಡಿಗೆ ಸಂಭ್ರಮ ತರಲಿ
ಬಳಲಿದ ಮನಕೆ ಸಿಹಿಯನು ಎರೆದು
ಭರವಸೆಯ ಬೆಳಕಾಗಲಿ ||
ಸುಗ್ಗಿಯ ಹಿಗ್ಗಿನ ಸ್ವಾಗತಕೆ
ತಳಿರು ತೋರಣ ತೂಗಲಿ
ಬಂಧು ಬಳಗದ ಸ್ನೇಹ ಕೂಟಕೆ
ಹುಗ್ಗಿಯು ಪರಿಮಳ ಬೀರಲಿ ||
ಎಳ್ಳು ಬೆಲ್ಲವ ಹಂಚಿ ಪಡೆದು
ಸಾಮರಸ್ಯವು ಬೆಳೆಯಲಿ
ಕಬ್ಬಿನ ಸಿಹಿಯಲಿ ಮಕ್ಕಳ ಕನಸು
ನನಸಿನ ಶಿಖರಕೆ ಏರಲಿ ||
ಕಾಲನ ಕಾಲದ ಬದಲಾವಣೆಗೆ
ಒಗ್ಗುವ ಮನಸನು ನೀಡಲಿ
ಹಬ್ಬದ ಹರುಷದ ಪ್ರೀತಿಯ ಹೊನಲು
ಹೃದಯ ಹೃದಯಗಳ ಬೆಸೆಯಲಿ ||