ಕರೊನಾ ಬಳಿಕ ಕಲಿಕೆ ಕುಸಿತ: ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ; ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲೆಗಳಲ್ಲಿ ಇಳಿಕೆ

 ಸಾಮರ್ಥ್ಯಾಧಾರಿತ ಶಿಕ್ಷಣ ಪರಿಕಲ್ಪನೆಯನ್ನು ಶಿಕ್ಷಕರಿಗೆ ಅರ್ಥೈಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ 'ಸಾಮರ್ಥ್ಯಾಧಾರಿತ ಶಿಕ್ಷಣ ಅಭಿಯಾನ' ಆರಂಭ



     ಕರೊನೋತ್ತರ ಅವಧಿಯಲ್ಲೂ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕಾ ಮಟ್ಟ ಸುಧಾರಣೆಯಾಗಿಲ್ಲ ಎಂಬ ಕಳವಳಕಾರಿ ಸಂಗತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2022-23ನೇ ಸಾಲಿನ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆಯಿಂದ ಬಹಿರಂಗವಾಗಿದೆ. ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಆದರೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮವಾರು ಕಲಿಕೆಯಲ್ಲಿ ವ್ಯತ್ಯಾಸ ಕಂಡು ಬಾರದಿರುವುದು ಗಮನಾರ್ಹ ಅಂಶವಾಗಿದೆ.

    ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗಿಂತ ಮುಂದಿದ್ದಾರೆ. ಸರ್ಕಾರಿ ಶಾಲೆಗಳ ಪೈಕಿ ಅತಿ ಹೆಚ್ಚು ಬೇಡಿಕೆ ಇರುವ ಕರ್ನಾಟಕ ಪಬ್ಲಿಕ್ ಶಾಲೆಗಿಂತ (ಕೆಪಿಎಸ್) ಆದರ್ಶ ವಿದ್ಯಾಲಯದ ಕಲಿಕೆ ಉತ್ತಮವಾಗಿದೆ. ತರಗತಿವಾರು ಕಲಿಕೆಯಲ್ಲಿ 3ನೇ ತರಗತಿ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಪ್ರಾಥಮಿಕ ಹಂತದಲ್ಲಿನ ನಲಿ-ಕಲಿ ಪದ್ಧತಿ ಪರಿಣಾಮಕಾರಿಯಾಗಿದೆ. ಪ್ರೌಢಶಾಲೆಗಳಲ್ಲಿ ಕಲಿಕಾ ಸಾಧನೆ ಕಡಿಮೆಯಾಗಿದ್ದು, ಶೈಕ್ಷಣಿಕ ಸುಧಾರಣಾ ಕ್ರಮಗಳ ಅವಶ್ಯಕತೆ ಎಂದು ಸಮೀಕ್ಷೆ ತಿಳಿಸಿದೆ.


ಸಮೀಕ್ಷೆ ಉದ್ದೇಶವೇನು?:


    ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್​ಕ್ಯುಎಎಸಿ) ಸಮೀಕ್ಷೆ ಜವಾಬ್ದಾರಿ ಹೊತ್ತಿದೆ. ರಾಜ್ಯದಲ್ಲಿ 2017 ಮತ್ತು 18ರಲ್ಲಿಯೂ 4ರಿಂದ 10ನೇ ತರಗತಿ ವರೆಗಿನ ಸಮೀಕ್ಷೆ ನಡೆಸಿತ್ತು. ಆದರೆ, ಕರೊನಾ ಬಳಿಕ ನಡೆಸಿದ ಮೊದಲ ಸಮೀಕ್ಷೆಯಾಗಿದೆ. ರಾಜ್ಯದ ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ತಿಳಿಯುವ ಜತೆಗೆ ಇದಕ್ಕೆ ಪೂರಕವಾಗಿ ಶಾಲೆಗಳ ಮೂಲಸೌಲಭ್ಯಗಳು, ಶಿಕ್ಷಕರ ವಿದ್ಯಾರ್ಹತೆ, ಮಧ್ಯಾಹ್ನದ ಬಿಸಿಯೂಟ, ಬೋಧನಾ- ಕಲಿಕಾ ವಾತಾವರಣ ಅರಿಯುವ ಉದ್ದೇಶ ಇದರದ್ದಾಗಿತ್ತು.


    ಕರೊನಾ ನಂತರ ಆರಂಭಿಸಿದ ಕಲಿಕಾ ಚೇತರಿಕೆಯಡಿ ಕಲಿಕೆಯ ಗುಣಮಟ್ಟ, ಶಾಲೆಯ ಆರೋಗ್ಯ ಮತ್ತು ನೈರ್ಮಲ್ಯ, ಐಸಿಟಿ ಲಭ್ಯತೆ ಮತ್ತ ಬಳಕೆ ಸೇರಿ ಶಿಕ್ಷಣ ಶಾಸ್ತ್ರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನ, 2021ರಲ್ಲಿ ನಡೆದ ರಾಷ್ಟ್ರೀಯ ಸಾಧನಾ ಸಮೀಕ್ಷೆ ಮತ್ತು 2022ರ ಪ್ರಾಥಮಿಕ ಕಲಿಕಾ ಸಮೀಕ್ಷೆ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ತಿಳಿಯುವ ಉದ್ದೇಶ ಹೊಂದಲಾಗಿತ್ತು.


ಎಲ್ಲಿ ಸರ್ವೆ?:


ರಾಜ್ಯದ 2,618 ಸರ್ಕಾರಿ ಪ್ರಾಥಮಿಕ ಮತ್ತು 694 ಪ್ರೌಢಶಾಲೆಗಳ 3, 5, 8, 9 ಮತ್ತು 10ನೇ ತರಗತಿಯ ಒಟ್ಟಾರೆ 2,11,843 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಜನವರಿಯಲ್ಲಿ ಸಮೀಕ್ಷೆ ನಡೆಸಿ ಕಲಿಕೆಯ ತುಲನಾತ್ಮಕ ವಿಶ್ಲೇಷಣೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಪರಿಸರ ಅಧ್ಯಯನ ವಿಷಯಗಳ ಕಲಿಕೆಯನ್ನು ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು) ಮಾದರಿ ಮತ್ತು ಬರವಣಿಗೆ ರೂಪದಲ್ಲಿ ಪರಿಗಣಿಸಲಾಗಿದೆ. ಬೆಂಗಳೂರಿನ ಬೆಂಗಳೂರಿನ ಡಯಟ್ ಕಚೇರಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ.


ಆಯ್ಕೆಯಾದ ಶಾಲೆಗಳು:


ರಾಜ್ಯದ ಎ, ಬಿ ಮತ್ತು ಸಿ ವಲಯಗಳಲ್ಲಿರುವ ಶಾಲೆಗಳನ್ನು ಯಾದೃಚ್ಛಿಕವಾಗಿ (ರ್ಯಾಂಡಮ್ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್), ಆದರ್ಶ ವಿದ್ಯಾಲಯ (ಸಮಗ್ರ ಶಿಕ್ಷಣ ಕರ್ನಾಟಕ ನಡೆಸುವ ಶಾಲೆಗಳು), ಮೌಲಾನಾ ಆಜಾದ್ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳನ್ನು ಪರಿಗಣಿಸಲಾಗಿತ್ತು. ತರಗತಿವಾರು, ಲಿಂಗವಾರು, ಗ್ರಾಮೀಣ, ನಗರ ಪ್ರದೇಶ, ವಲಯವಾರು ಮತ್ತು ಸಾಮಾಜಿಕ ವರ್ಗದ ಕಲಿಕೆಯ ಸಮೀಕ್ಷೆ ನಡೆಸಲಾಗಿದೆ.


ಕೆಪಿಎಸ್​ಗಿಂತ ಆದರ್ಶ ಶಾಲೆ ಉತ್ತಮ:


ಪ್ರೌಢಶಾಲೆಗಳ ಕಲಿಕೆಯನ್ನು ವಿಶ್ಲೇಷಿಸಿದಾಗ 8, 9 ಮತ್ತು 10ನೇ ತರಗತಿಯಲ್ಲಿ ಆದರ್ಶ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಧನೆ ಉತ್ತಮವಾಗಿದೆ. ಪ್ರವೇಶ ಪರೀಕ್ಷೆ ಮೂಲಕ ಆದರ್ಶ ವಿದ್ಯಾಲಯಗಳ ದಾಖಲಾತಿ ನಡೆಯುವುದರಿಂದ ಕಲಿಕೆ ಚೆನ್ನಾಗಿರಬಹುದು ಎಂದು ಅಂದಾಜಿಸಲಾಗಿದೆ.


ಮೌಲಾನಾ ಆಜಾದ್ ಶಾಲೆಗಳಲ್ಲಿ ಕಲಿಕೆ ಸಾಧಾರಣವಾಗಿದ್ದು, ಹೆಚ್ಚು ಗಮನ ಹರಿಸಬೇಕಿದೆ. ಕೆಪಿಎಸ್ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಅನುದಾನ ನೀಡಿದ್ದರೂ ಕಲಿಕಾ ಸಾಧನೆ ಕಡಿಮೆ ಇದ್ದು, ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಆದರ್ಶ ಶಾಲೆಗಳಲ್ಲಿನ ಕಲಿಕೆ ಶೇ.54 ಇದ್ದು, ಉಳಿದ ಶಾಲೆಗಳಲ್ಲಿ ಶೇ.45ಕ್ಕಿಂತ ಕಡಿಮೆ ಇದೆ. ವಿಜ್ಞಾನ ವಿಷಯದಲ್ಲಿ ಯಾವುದೇ ಶಾಲೆಯೂ ಶೇ.44ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಿಲ್ಲ.


ಎಲ್ಲ ವಿಷಯಗಳಿಗೂ ಶಿಕ್ಷಕರಿಲ್ಲ:


ಸಮೀಕ್ಷೆಯಲ್ಲಿ ಶಿಕ್ಷಕರನ್ನು ಕುರಿತ ವಿಷಯಗಳನ್ನು ಸಹ ಪರಿಗಣಿಸಲಾಗಿದೆ. ಒಟ್ಟಾರೆ ಶಿಕ್ಷಕರಲ್ಲಿ ಶೇ.0.43 ಶಿಕ್ಷಕರು ಮಾತ್ರ ಪಿಎಚ್.ಡಿ ಪದವಿಧರರಾಗಿದ್ದಾರೆ. ಹಾಗೆಯೇ ಶೇ.14.67 ಜನರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಿಗದಿಪಡಿಸಿರುವ ಎಲ್ಲ ವಿಷಯಗಳ ಶಿಕ್ಷಕರನ್ನು ಒಳಗೊಂಡಿರುವ ಶಾಲೆಗಳು ಶೇ.35.27 ಮಾತ್ರ ಎಂಬ ನಿರಾಶಾದಾಯಕ ವಿಷಯ ಬೆಳಕಿಗೆ ಬಂದಿದೆ. ಶೇ.62 ಶಾಲೆಗಳಲ್ಲಷ್ಟೇ ಸ್ಮಾರ್ಟ್ ಬೋರ್ಡ್ ಲಭ್ಯವಿದೆ.


       ಕಲಿಕೆಗೆ ಪರಿಗಣಿಸಿರುವ ಅಂಶಗಳು: ಜ್ಞಾನ, ತಿಳಿವಳಿಕೆ, ಹಿಂದಿನ ವರ್ಷದ ಶೇ.20 ಕಲಿಕಾ ವಿಷಯಗಳು ಹಾಗೂ ಪಠ್ಯಪುಸ್ತಕದಲ್ಲಿರುವ ಪ್ರಶ್ನೆಗಳು


ಅಧಿಕಾರಿಗಳು ಏನು ಮಾಡ್ಬೇಕು?


    1ರಿಂದ 3ನೇ ತರಗತಿ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ವಾಸ್ತವ ತಿಳಿದು ಕಾರ್ಯತಂತ್ರ ರೂಪಿಸುವುದು. ರಾಜ್ಯಾದ್ಯಂತ ಮಿಷನ್ ಮಾದರಿಯಲ್ಲಿ ಒಗ್ಗೂಡಿ ಪ್ರಯತ್ನ ಮಾಡುವುದು.

     ಕಲಿಕಾ ಫಲಗಳ ಆಧಾರಿತ ಕಲಿಕೆ ಉಂಟುಮಾಡಲು ಎಲ್ಲ ವಿಷಯಗಳಲ್ಲಿ ವೃತ್ತಿ ತರಬೇತಿ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳುವುದು ಸಾಮರ್ಥ್ಯಾಧಾರಿತ ಶಿಕ್ಷಣ ಅಭಿಯಾನ’ ಆರಂಭಿಸುವುದು.

     ಯಾವ ವಿಷಯದಲ್ಲಿ ಕಲಿಕಾ ಸಾಮರ್ಥ್ಯದಲ್ಲಿ ವಿದ್ಯಾರ್ಥಿಗಳ ಸಾಧನೆ ಕಡಿಮೆಯಾಗಿದೆ ಎಂಬುದನ್ನು ಪರಿಶೀಲಿಸಿ ಜಿಲ್ಲಾವಾರು ಕ್ರಮ ಕೈಗೊಳ್ಳುವುದು



ಸುಧಾರಣೆಗೆ ಶಿಫಾರಸು


* ನಗರ ಪ್ರದೇಶದ ಮಕ್ಕಳ ಕಲಿಕೆಗೆ ಗಮನ ಹರಿಸಬೇಕಿದೆ.

* ಪ್ರೌಢಶಾಲೆಗಳ ಗಣಿತ, ವಿಜ್ಞಾನದಲ್ಲಿ ಸಾಧನೆ ಕಡಿಮೆ.

* ಹೈಸ್ಕೂಲ್​ಗಳಲ್ಲಿ ವಿಷಯವಾರು ಪ್ರತ್ಯೇಕ ಕ್ರಿಯಾಯೋಜನೆ ರೂಪಿಸಬೇಕಿದೆ.

* ಎಂಸಿಕ್ಯುಗಿಂತ ವಿವರಣಾತ್ಮಕ ಪ್ರಶ್ನೆಗಳೇ ಜಟಿಲ

* ಬರವಣಿಗೆ ಸಾಮರ್ಥ್ಯ ವೃದ್ಧಿಸಲು ಕ್ರಮ ವಹಿಸಬೇಕಿದೆ

* ಹಿಂದುಳಿದಿರುವ ಪರಿಶಿಷ್ಟ ಜಾತಿ, ಪಂಗಡದ ಸ್ಟೂಡೆಂಟ್ಸ್  ಪರಿಶಿಷ್ಟರಿಗಾಗಿ ಪ್ರತ್ಯೇಕ ಶೈಕ್ಷಣಿಕ ಕ್ರಿಯಾಯೋಜನೆ.