ಬೆ೦ಗಳೂರು: ಪರಿಶಿಷ್ಟ ಪಂಗಡಗಳ(ST)
ಪಟ್ಟಿಯಿಂದ ನಾಯಕ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಕೈಬಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ
ನಿರ್ದೇಶನ ನೀಡಬೇಕೆಂದು ಕೋರಿ
ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.ಅಸಹಾಯಕ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ಸಾಂವಿಧಾನಿಕ ನಿಬಂಧನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರ ಪ್ರಕಾರ ಯಾವೆಲ್ಲ ಸಮುದಾಯಗಳನ್ನು ಸೇರ್ಪಡೆ
ಮಾಡಬೇಕು ಮತ್ತು ಕೈ ಬಿಡಬೇಕೆಂಬುದರ ಬಗ್ಗೆ ಶಾಸನ ರೂಪಿಸುವುದು ಸಂಸತ್ತಿನ ವಿಶೇಷ ಅಧಿಕಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸಲು ಬಯಸುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಲಾಗಿದೆ.