ಕನಕದಾಸರು

 ಶ್ರೀ ಕನಕದಾಸರು [ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.


ಜನನ

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.


ಐತಿಹ್ಯ

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.


ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.


ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.


ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.


ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.


ಸಾಧನೆ

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು.


ಕನಕ ದಾಸರ ಸಾಹಿತ್ಯ ರಚನೆ

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:


ಮೋಹನತರಂಗಿಣಿ

ನಳಚರಿತ್ರೆ

ರಾಮಧಾನ್ಯ ಚರಿತೆ

ಹರಿಭಕ್ತಿಸಾರ

ನೃಸಿಂಹಸ್ತವ (ದೊರೆತಿಲ್ಲ)


ಕೀರ್ತನೆಗಳು

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.


ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.


ಕೀರ್ತನೆಗಳು













ಕೃಪೆ : ವಿಕಿಪೀಡಿಯ