ದ್ವಿರುಕ್ತಿ
ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಅನ್ನುವರು.
ದ್ವಿರುಕ್ತಿ ಸಾಮಾನ್ಯವಾಗಿ
ಉತ್ಸಾಹ,
ಹೆಚ್ಚು ,
ಕೋಪ,
ಸಂಭ್ರಮ,
ಆಶ್ಚರ್ಯ,
ಆಕ್ಷೇಪ,
ಹರ್ಷ,
ಒಪ್ಪಿಗೆ (ಸಮ್ಮತಿ),
ಅವಸರ (ತ್ವರೆ),
ಅನುಕ್ರಮ,
ಆದರ,
ಇಂತಹ ಅನೇಕ ವಸ್ತುಗಳಲ್ಲಿ ಒಂದನ್ನೇ ಗುರುತಿಸಿ ಹೇಳುವಾಗ- ಹೀಗೆ ಅನೇಕ ಅರ್ಥಗಳಲ್ಲಿ ಬರುತ್ತದೆ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.
(ದ್ವಿಃ ಉಕ್ತಿ = ದ್ವಿರುಕ್ತಿ)
ದ್ವಿರುಕ್ತಿ ಅದರೆ ಒಂದು ಶಬ್ದವನ್ನು ಎರಡು ಸಲ ಉಚ್ಚರಿಸುವುದೆಂದು ಅರ್ಥ.
ಕೆಳಗಿನ ವಾಕ್ಯಗಳನ್ನು ನೋಡಿರಿ.
* ಭಿಕ್ಷುಕರು ಮನೆಮನೆಗಳನ್ನು ತಿರುಗಿ ಬಿಕ್ಷೆ ಬೇಡಿದರು.
* ಮಗನೇ, ಬೇಗಬೇಗ ಬಾ.
* ಮಕ್ಕಳು ಓಡಿಓಡಿ ದಣಿದರು.
* ಅಕ್ಕಟಕ್ಕಟಾ! ಕಷ್ಟಕಷ್ಟ!
* ಈಗೀಗ ಅವನು ಚೆನ್ನಾಗಿ ಓದುತ್ತಾನೆ.
* ದೊಡ್ಡದೊಡ್ಡ ಮಕ್ಕಳು ಬಂದರು.
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಶಬ್ದಗಳನ್ನು ನೋಡಿರಿ. ಇಲ್ಲಿ ಮನೆ ಮನೆ, ಬೇಗ ಬೇಗ, ಓಡಿ ಓಡಿ, ಅಕ್ಕಟಾ ಅಕ್ಕಟಾ, ಈಗ ಈಗ, ದೊಡ್ಡ ದೊಡ್ಡ-ಇತ್ಯಾದಿ
ಶಬ್ದಗಳನ್ನು ಎರಡೆರಡು ಸಲ ಪ್ರಯೋಗಿಸಲಾಗಿದೆ.
“ಮನೆಮನೆಗಳನ್ನು ತಿರುಗಿ” ಎಂಬಲ್ಲಿ ಪ್ರತಿಯೊಂದು ಮನೆಯನ್ನೂ ತಿರುಗಿ ಎಂಬರ್ಥವೂ,
“ಬೇಗಬೇಗ ಬಾ” ಎಂಬಲ್ಲಿ ಅವಸರ(ತ್ವರೆ)ವೂ ವ್ಯಕ್ತವಾಗುವುದು. “ಓಡಿಓಡಿ ದಣಿದರು”
ಎಂಬಲ್ಲಿ ಆಧಿಕ್ಯ(ಹೆಚ್ಚು ಓಡಿದನೆಂಬ ಆಧಿಕ್ಯ)ವೂ ವ್ಯಕ್ತವಾಗುವುದು.
ಹೀಗೆ ನಾವು ಒಂದು ಶಬ್ದವನ್ನು ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕೋಸುಗ
ಎರಡೆರಡು ಸಲ ಪ್ರಯೋಗಿಸುವುದು ಉಂಟು.
ಉದಾಹರಣೆಗೆ:-
ದ್ವಿರುಕ್ತಿಯಲ್ಲಿ ಬರುವ ಕೆಲವು ವಿಶೇಷ ರೂಪಗಳು
ಉದಾಹರಣೆಗೆ:-
(1) ಉತ್ಸಾಹದಲ್ಲಿ-
ಹೌದು ಹೌದು! ನಾನೇ ಗೆದ್ದೆ.
ನಿಲ್ಲು ನಿಲ್ಲು! ನಾನೂ ಬರುತ್ತೇನೆ.
ಇಗೋ! ನಾನೂ ಬಂದೆ, ನಾನೂ ಬಂದೆ.
(2) ಹೆಚ್ಚು (ಆಧಿಕ್ಯ) ಎಂಬರ್ಥದಲ್ಲಿ-
ದೊಡ್ಡ ದೊಡ್ಡ ಕಾಯಿ ಬಿಟ್ಟಿದೆ.
ಹೆಚ್ಚು ಹೆಚ್ಚು ಜನ ಸೇರಬೇಕು.
(3) ಪ್ರತಿಯೊಂದೂ ಎಂಬರ್ಥ (ವೀಪ್ಸಾ) ದಲ್ಲಿ-
ಮನೆಮನೆಗಳನ್ನು ತಿರುಗಿದನು.
ಕೇರಿಕೇರಿಗಳಲ್ಲಿ ಅಲೆದನು.
ಊರೂರು ತಿರುಗಿ ಬೇಸತ್ತನು.
(4) ಕೋಪದಲ್ಲಿ-
ಎಲೆಲಾ! ಮೂರ್ಖ, ನಿಲ್ಲು ನಿಲ್ಲು! ಬಂದೆ.
ಎಲೆಲೆ! ನಿನ್ನನ್ನು ಕೊಲ್ಲದೆ ಬಿಡುವೆನೆ?
ಕಳ್ಳಾ ಕಳ್ಳಾ ನಿನ್ನನ್ನು ಸುಮ್ಮನೆ ಬಿಡುವೆನೆ?
(5) ಸಂಭ್ರಮದಲ್ಲಿ-
ಅಗೋ ಅಗೋ! ಎಷ್ಟು ಚೆನ್ನಾಗಿದೆ!
ಬನ್ನಿ ಬನ್ನಿ! ಕುಳಿತುಕೊಳ್ಳಿ.
ಹತ್ತಿರ ಬಾ, ಹತ್ತಿರ ಬಾ.
ಮೇಲೆ ಕೂಡಿರಿ! ಮೇಲೆ ಕೂಡಿರಿ!
(6) ಆಶ್ಚರ್ಯದಲ್ಲಿ-
ಅಬ್ಬಬ್ಬಾ! (ಅಬ್ಬಾ+ಅಬ್ಬಾ) ಎಂಥ ರಮ್ಯ ನೋಟವಿದು!
ಅಹಹಾ? ಈತನ ಆಟ ಆಶ್ಚರ್ಯಕರ.
(7) ಆಕ್ಷೇಪಾರ್ಥದಲ್ಲಿ-
ಬೇಡ ಬೇಡ ಅವನಿಗೆ ಕೊಡಬೇಡ.
ನಡೆ ನಡೆ ದೊಡ್ಡವರ ರೀತಿ ಅವನಿಗೇಕೆ?
ಎಲೆಲಾ! ನಿನ್ನಂಥವನು ಹಾಗೆ ನುಡಿಯಬಹುದೇ?
(8) ಹರ್ಷದಲ್ಲಿ-
ಅಹಹಾ (ಅಹಾ+ಅಹಾ) ನಾವೇ ಧನ್ಯರು.
ಅಮ್ಮಾ, ಅಮ್ಮಾ, ನಾನೇ ಈಚಿತ್ರ ಬರೆದವನು.
ನಿಲ್ಲಿ ನಿಲ್ಲಿ! ನಾನೂ ನೋಡಲು ಬರುತ್ತೇನೆ.
(9) ಒಪ್ಪಿಗೆ (ಸಮ್ಮತಿ) ಯ ಅರ್ಥದಲ್ಲಿ-
ಹೌದು ಹೌದು ಯೋಗ್ಯನಿಗೇ ಸಂಭಾವನೆ ದೊರಕಿದೆ.
ಆಗಲಿ ಆಗಲಿ ನೀವು ಬರುವುದು ಸಂತೋಷಕರ.
ಇರಲಿ ಇರಲಿ ಉತ್ತಮನಾದವನೇ ಇರಲಿ.
(10) ಅವಸರ (ತ್ವರೆ) ದ ಅರ್ಥದಲ್ಲಿ-
ಓಡು ಓಡು, ಬೇಗಬೇಗ ಓಡು.
ನಡೆ ನಡೆ ಹೊತ್ತಾಯಿತು.
ಬಾ ಬಾ ಬೇಗಬೇಗ ಬಾ.
(11) ಅನುಕ್ರಮದ ಅರ್ಥದಲ್ಲಿ-
ಗಿಡವು ಮೊದಮೊದಲು ಚಿಕ್ಕಚಿಕ್ಕ ಎಲೆಗಳನ್ನೂ, ಆಮೇಲೆ ದೊಡ್ಡ ದೊಡ್ಡ ಎಲೆಗಳನ್ನೂ ಬಿಡುತ್ತದೆ.
ಚಿಕ್ಕಚಿಕ್ಕ ಮಕ್ಕಳು ಮೊದಲು ಊಟ ಮಾಡಲಿ. ಆಮೇಲೆ ದೊಡ್ಡ ದೊಡ್ಡ ಮಕ್ಕಳು ಊಟ ಮಾಡಲಿ.
ದೊಡ್ಡ ದೊಡ್ಡ ವಿಚಾರಗಳನ್ನು ದೊಡ್ಡದೊಡ್ಡವರಿಂದಲೇ ಕೇಳಬೇಕು.
(12) ಆದರದ ಅರ್ಥದಲ್ಲಿ-
ಅಣ್ಣಾ ಬಾಬಾ, ಮೊದಲು ಊಟ ಮಾಡು.
ಇತ್ತ ಬನ್ನಿ, ಇತ್ತ ಬನ್ನಿ, ಮೇಲೆ ಕುಳಿತುಕೊಳ್ಳಿ.
ಭಾವ ಬಂದ, ಭಾವ ಬಂದ, ಕಾಲಿಗೆ ನೀರು ಕೊಡು, ನೀರು ಕೊಡು.
(13) ಅನೇಕ ವಸ್ತುಗಳಲ್ಲಿ ಒಂದನ್ನು ಗುರುತಿಸುವಿಕೆಯಲ್ಲಿ-
ಈ ನಾಣ್ಯದ ಚೀಲದಲ್ಲಿ ಒಂದೊಂದು ಕಾಸು ತೆಗೆದು ಒಬ್ಬಬ್ಬನಿಗೆ ಹಂಚು.
ಈ ಹಣ್ಣುಗಳಲ್ಲಿ ಚಿಕ್ಕಚಿಕ್ಕವನ್ನು ಆರಿಸಿ ಬೇರೆ ಇಡು.
ದೊಡ್ಡ ದೊಡ್ಡ ಕಲ್ಲುಗಳನ್ನೇ ಎತ್ತಿ ತಾ.
ದ್ವಿರುಕ್ತಿಯಲ್ಲಿ ಬರುವ ಕೆಲವು ವಿಶೇಷ ರೂಪಗಳು
ಮೊದಲು+ಮೊದಲು=ಮೊಟ್ಟಮೊದಲು-ಮೊತ್ತಮೊದಲು
ಕಡೆಗೆ+ಕಡೆಗೆ=ಕಟ್ಟಕಡೆಗೆ-ಕಡೆಕಡೆಗೆ
ನಡುವೆ+ನಡುವೆ=ನಟ್ಟನಡುವೆ=ನಡುನಡುವೆ
ಬಯಲು+ಬಯಲು=ಬಟ್ಟಬಯಲು
ತುದಿ+ತುದಿ=ತುತ್ತತುದಿ-ತುಟ್ಟತುದಿ
ಕೊನೆಗೆ+ಕೊನೆಗೆ=ಕೊನೆಕೊನೆಗೆ
ಮೆಲ್ಲನೆ+ಮೆಲ್ಲನೆ=ಮೆಲ್ಲಮೆಲ್ಲನೆ
ಮೊದಲು+ಮೊದಲು
ಎಂಬಲ್ಲಿ ಮೊದಲನೆಯ ‘ಮೊದಲು’ ಪದವು ‘ಮೊಟ್ಟ’ ಅಥವಾ
‘ಮೊತ್ತ’ ಎಂದೂ, ಕಡೆಗೆ+ಕಡೆಗೆ ಎಂಬಲ್ಲಿ ಮೊದಲನೆಯ ‘ಕಡೆಗೆ’ ಪದವು ‘ಕಟ್ಟ’ ಎಂದೂ 'ಕಡೆ’ ಎಂದೂ ಉಳಿಯುವುದು. ಇದರ ಹಾಗೆ ಉಳಿದ ಕಡೆಗಳಲ್ಲಿ ದ್ವಿರುಕ್ತಿಯಾದಾಗ ಆಗುವ ರೂಪಗಳನ್ನು ನೋಡಿ ತಿಳಿಯಿರಿ. ಮೇಲೆ ಹೇಳಿದ ದ್ವಿರುಕ್ತಿಯ ಹಾಗೆ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಭಾಷೆಯಲ್ಲಿ ಪ್ರಯೋಗಿಸುವುದುಂಟು.
ಜೋಡುನುಡಿ
ಅವು ದ್ವಿರುಕ್ತಿಗಳ ಹಾಗೆ ಕಂಡರೂ ದ್ವಿರುಕ್ತಿಗಳಲ್ಲ. ಅವು ಒಂದು ರೀತಿಯ ಜೋಡು ನುಡಿಗಟ್ಟುಗಳೆಂದು ಹೇಳಬೇಕು. ಅವುಗಳಲ್ಲಿ ಮೊದಲನೆಯ ಪದಕ್ಕೆ ಅರ್ಥವುಂಟು. ಎರಡನೆಯ ಪದಕ್ಕೆ ಕೆಲವು ಕಡೆ ಅರ್ಥವುಂಟು.
ಆದರೆ ಕೆಲವು ಕಡೆ ಅರ್ಥವಿರುವುದಿಲ್ಲ. ಉದಾಹರಣೆಗೆ ಕೆಳಗಿನ ವಾಕ್ಯಗಳಲ್ಲಿ ದಪ್ಪಅಕ್ಷರದಲ್ಲಿರುವಂಥ ಪದಗಳನ್ನು ನೋಡಿರಿ.
(1) ಕಾಯಿಕಸರು ಬೆಳೆಯುತ್ತೇನೆ-ಕಾಯಿ-ಕಸರು ಎಂಬಲ್ಲಿ ‘ಕಸರು’ ಪದಕ್ಕೆ ಅರ್ಥವಿಲ್ಲ.
(2) ದೇವರುಗೀವರ ಕಾಟ ಇದೆಯೋ? – ಇಲ್ಲಿ ‘ಗೀವರು’ ಎಂಬ ಪದಕ್ಕೆ ಅರ್ಥವಿಲ್ಲ.
(3) ಬಟ್ಟೆಬರೆಗಳನ್ನು ಕೊಂಡನು-ಇಲ್ಲಿ ‘ಬರೆ’ ಎಂಬ ಪದಕ್ಕೆ ಅರ್ಥವಿಲ್ಲ.
(4) ಮಕ್ಕಳುಗಿಕ್ಕಳು ಇವೆಯೋ? – ಇಲ್ಲಿ ‘ಗಿಕ್ಕಳು’ ಎಂಬ ಪದಕ್ಕೆ ಅರ್ಥವಿಲ್ಲ.
(5) ಸೊಪ್ಪುಸೆದೆ ಬೆಳೆಯುತ್ತಾನೆ-ಇಲ್ಲಿ ‘ಸೆದೆ’ ಎಂಬ ಪದಕ್ಕೆ ಅರ್ಥವಿಲ್ಲ.
(6) ಮಕ್ಕಳುಮರಿ ಜೋಪಾನ ಮಾಡಿದನು-ಇಲ್ಲಿ ‘ಮರಿ’ ಎಂಬ ಪದಕ್ಕೆ ಅರ್ಥವುಂಟು.
(7) ಸಾಲಸೋಲ ಮಾಡಿದ್ದಾನೆ-ಇಲ್ಲಿ ‘ಸೋಲ’ ಎಂಬ ಪದಕ್ಕೆ ಅರ್ಥವಿಲ್ಲ.
(8) ಹುಳುಹುಪ್ಪಡಿಗಳಿದ್ದಾವು? – ಇಲ್ಲಿ ‘ಹುಪ್ಪಡಿ’ ಎಂಬ ಪದಕ್ಕೆ ಅರ್ಥವಿಲ್ಲ.
ಈ ಮೇಲೆ ಹೇಳಿದ ಪದಗಳು ಮಾತುಗಳಲ್ಲಿ, ಗ್ರಂಥಗಳಲ್ಲಿ ಕೆಲವರಿಂದ ಪ್ರಯೋಗಿಸಲ್ಪಡುತ್ತವೆ. ಇವು ಒಂದೇ ರೀತಿಯ ಎರಡು ಶಬ್ದಗಳ ಪ್ರಯೋಗಗಳಲ್ಲ. ಬೇರೆಬೇರೆ ರೀತಿಯ ಎರಡು ಪದಗಳು. ಎರಡನೆಯ ಶಬ್ದಕ್ಕೆ ವಾಚಾರ್ಥವಿಲ್ಲದಿದ್ದರೂ ಮೊದಲನೆಯ ಶಬ್ದದ ಅರ್ಥಕ್ಕೆ ಪುಷ್ಟಿಯನ್ನು ಕೊಡಲು ಉಪಯೋಗಿಸುವ ಪದಗಳಾಗಿವೆ.