ನಾಮವಾಚಕ ವಿಧಗಳು

 



ನಾಮವಾಚಕದ ವಿಧಗಳು

ವಸ್ತುವಾಚಕ

ಗುಣವಾಚಕ

ಸಂಖ್ಯಾವಾಚಕ

ಸಂಖ್ಯೇಯ ವಾಚಕ

ಭಾವನಾಮಗಳು

ಪರಿಮಾಣವಾಚಕ

ಪ್ರಕಾರವಾಚಕ

ದಿಗ್ವಾಚಕ

ಸರ್ವನಾಮಗಳು...


1. ವಸ್ತುವಾಚಕ:

ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳೆಲ್ಲವೂ ವಸ್ತುವಾಚಕಗಳು ಎನಿಸುವುವು.


ಉದಾ: ಮನುಷ್ಯ, ಬಸವ, ಮುದುಕ, ಮರ, ಹಣ್ಣು, ಅಡವಿ, ಶಾಲೆ.


ವಸ್ತುವಾಚಕದಲ್ಲಿ ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂದು ಮೂರು ಉಪ ವಿಭಾಗ ಮಾಡಬಹುದು.


ರೂಢನಾಮ:

ರೂಢಿಯಿಂದ ಬಂದ ನಾಮವಾಚಕಗಳು ರೂಢನಾಮಗಳು ಎನಿಸುವುವು.

ಉದಾಹರಣೆ: ನದಿ, ಪರ್ವತ, ದೇಶ, ಊರು, ಮರ. ಮನುಷ್ಯ, ಹುಡುಗ.


ಅಂಕಿತನಾಮ:

ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೆಲ್ಲಾ ಅಂಕಿತನಾಮಗಳು ಎನಿಸುವುವು.

ಉದಾಹರಣೆ: ಗಂಗಾ, ಬ್ರಹ್ಮಪುತ್ರ, ಹಿಮಾಲಯ, ಭಾರತ, ಬೇಲೂರು, ಬೇವು, ಸಲ್ಮ, ಗಾಂಧೀಜಿ.


ಅನ್ವರ್ಥನಾಮ:

ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲಾ ಅನ್ವರ್ಥನಾಮಗಳು ಎನಿಸುವುವು.

ಉದಾಹರಣೆ: ಯೋಗಿ, ವ್ಯಾಪಾರಿ, ಜಾಣ, ಇತ್ಯಾದಿ.


2. ಗುಣವಾಚಕಗಳು:

ವಸ್ತುಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕಗಳು ಎನಿಸುವುವು,


ಉದಾಹರಣೆ: ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕೆಟ್ಟ, ಒಳ್ಳೆಯ, ಕಿರಿಯ.


3. ಸಂಖ್ಯಾವಾಚಕಗಳು:

ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲವೂ ಸಂಖ್ಯಾವಾಚಕ ಎನಿಸುವುವು.


ಉದಾಹರಣೆ: ಒಂದು, ಎರಡು, ಹತ್ತು, ಸಾವಿರ, ಲಕ್ಷ.


4. ಸಂಖ್ಯೇಯವಾಚಕಗಳು:

ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳೆನಿಸುವುವು.


ಉದಾಹರಣೆ: ಒಂದನೆಯ, ಇಮ್ಮಡಿ, ಹತ್ತರಿಂದ ಮುಂತಾದವು.


5. ಭಾವನಾಮಗಳು:

ಭಾವನೆಗಳನ್ನು ಸೂಚಿಸುವ ಶಬ್ದಗಳೇ ಭಾವನಾಮಗಳು.


ಉದಾಹರಣೆ: ಓಹೋ, ಅಯ್ಯೋ, ಅಬ್ಬಬ್ಬ.


6. ಪರಿಮಾಣವಾಚಕಗಳು:

ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಗಳೆನ್ನುವರು.


ಉದಾಹರಣೆ : ಅಷ್ಟು, ಇಷ್ಟು, ಹಲವು, ಕೆಲವು, ಅನಿತು


7. ಪ್ರಕಾರವಾಚಕಗಳು:

ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.


ಉದಾಹರಣೆ : ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ ಮಂತಾದವು.


8. ದಿಗ್ವಾಚಕಗಳು:

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು


ಉದಾಹರಣೆಗೆ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ ಇತ್ಯಾದಿ.


9. ಸರ್ವನಾಮಗಳು:

ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು


ಉದಾಹರಣೆ: ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.


ಸರ್ವನಾಮಗಳನ್ನು ಪುರುಷಾರ್ಥಕ, ಪ್ರಶ್ನಾರ್ಥಕ, ಆತ್ಮಾರ್ಥಕಗಳೆಂದು ವಿಂಗಡಿಸಲಾಗಿದೆ.


ಪುರುಷಾರ್ಥಕಗಳನ್ನು ಉತ್ತಮ, ಮಧ್ಯಮ, ಅನ್ಯ(ಪ್ರಥಮ) ಪುರುಷಗಳೆಂದು ವಿಭಾಗಿಸಿದೆ.


ಉತ್ತಮ ಪುರುಷ – ನಾನು, ನಾವು


ಮಧ್ಯಮ ಪುರುಷ – ನೀನು, ನೀವು


ಅನ್ಯಪುರುಷ (ಪ್ರಥಮಪುರುಷ) – ಅವನು, ಇವನು, ಅವರು, ಇವರು

ಅವಳು, ಇವಳು, ಅವರು, ಇವರು

ಅದು, ಇದು, ಅವು, ಇವು


ಪ್ರಶ್ನಾರ್ಥಕ – ಯಾರು?, ಏನು?, ಯಾವುದು?


ಆತ್ಮಾರ್ಥಕ – ತಾನು, ತಾವು, ತನ್ನ, ತಮ್ಮ...