ಸರ್ವಜ್ಞ ಜಯಂತಿ ಯ ವಿಶೇಷ
( 20 ಫೆಬ್ರುವರಿ )
ತ್ರಿಪದಿಗಳ ಬ್ರಹ್ಮ ಸರ್ವಜ್ಞ
ಸರ್ವಜ್ಞ ರ ವಿಕಿಪೀಡಿಯ
ಅವರ ಭಾವಚಿತ್ರದ ಮೇಲೆ ಕ್ಲಿಕ್ ಮಾಡಿ..
ಸರ್ವಜ್ಞ ಈ ನಾಡಿನ ಆಸ್ತಿ ... ಆತನ
ತ್ರಿಪದಿಗಳು ಜ್ಞಾನದ ಭಂಡಾರ ..
ನಮ್ಮ ನಾಡು ಎಂದೂ ಮರೆಯದ ಮಾಣಿಕ್ಯ. ಅಂತಹ ಶ್ರೇಷ್ಠ ರ ಜನ್ಮ ದಿನದ ಪ್ರಯುಕ್ತ ನನ್ನ ಹಿಂದಿನ ಸಣ್ಣ ಸಾಹಿತ್ಯ.....
ನಮ್ಮ ಸರ್ವಜ್ಞ
ಹದಿನಾರು - ಹದಿನೇಳನೇ ಶತಮಾನದಲ್ಲಿ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮುಕುಟಪ್ರಾಯವಾಗಿದ್ದ ವರಕವಿಯ ಬಗ್ಗೆ ಇಪ್ಪತ್ತೊಂದನೇ ಶತಮಾನದ ಒಬ್ಬ ಸಾಮಾನ್ಯನು ಏನೆಂದು ಬರೆಯುವುದು ಹೇಳಿ ? ಆದರೂ ಸಾಮಾನ್ಯ ಓದುಗನಾದ ನನಗೆ ಚಿಕ್ಕ ಪ್ರಯತ್ನವು ಚಿಗುರೊಡೆದಿದೆ.
ನಾ ಹೇಳಬಯಸಲು ಕಾರಣ ನಮ್ಮ ನಾಡಿನ ಕವಿಯ ಹುಟ್ಟೂರುಗಳ ಸಮೀಪದಲ್ಲಿ ಬೆಳೆದವನಾಗಿದ್ದೇನೆ. 'ಅವನಮ್ಮವ ಅವನಮ್ಮವ' ಎನ್ನುವಲ್ಲಿಯೇ ಎರಡು- ಮೂರು ಶತಮಾನ ಕಳೆದರೂ ಗುರುತಿಸುವಂತಹ , ಹೇಳಿಕೊಳ್ಳುವಂತಹ ಯಾವುದೇ ಕಾರ್ಯಗಳು ಕಾರ್ಯಗತವಾಗಿಲ್ಲ ಎಂಬುದೇ ವಿಷಾದನೀಯ.
ಇತ್ತೀಚೆಗೆ ನಾವು ವರಕವಿಯ ಜನ್ಮಸ್ಥಳ ವನ್ನು ವೀಕ್ಷಿಸಿದೆವು.ಸರ್ವವನ್ನು ತಿಳಿದು ಸರ್ವಜ್ಞ ನಾದ 'ಪುಷ್ಪದತ್ತ' ನ ಜನ್ಮಸ್ಥಾನಕ್ಕೆ ಒಂದು ಪುಷ್ಪವನ್ನು ಇಡದಂತಹ ಸ್ಥಿತಿಯಲ್ಲಿ ಆ ಸ್ಥಳವಿದೆ. ಇದೇ ಮುಂದಾಗಿ ನಮ್ಮವರೇ ಇಲ್ಲ ಮುಂದಿನ ತಲಮಾರಿನವರು 'ಇವನಾರವ ಇವನಾರವ' ಎನ್ನುವಂತಾಗದಿರಲಿ ಎಂಬುದೇ ನಮ್ಮ ಆಶಯ.
ಸಾಹಿತ್ಯದ ಪ್ರಕಾರಗಳು ಹಲವಾರಿದ್ದರೂ ಪ್ರತಿಯೊಬ್ಬರಿಗೂ ಸುಲಭವಾಗಿ ಸುಲಲಿತವಾಗಿ ಅರ್ಥವಾಗುವುದು ಮೂರು ಸಾಲಿನ ಪದ್ಯಗಳು.ಏಳನೇ ಶತಮಾನದ ಬಾದಾಮಿ ಶಾಸನ ಹಳಗನ್ನಡ ಲಿಪಿಯಲ್ಲಿ ರಚಿತವಾದ ಕಪ್ಪೆಅರಭಟ್ಟನ ಶಾಸನ.ತ್ರಿಪದಿಗಳಿಂದ ರಚನೆಯಾದ ಕನ್ನಡದ ಮೊದಲ ಶಾಸನ (ಸಾಹಿತ್ಯ) ಇದಾಗಿದೆ.ತ್ರಿಪದಿಯು ತಿವಿಧಿ , ತಿವುಡೆ , ತ್ರಿಪದಿಕಾ , ತ್ರಿವಿಧಿ ಎಂಬ ಹೆಸರುಗಳಿಂದ ರೂಪಾಂತರಗೊಂಡಿದೆ.ಹಲವಾರು ಕವಿವರ್ಯರು ತ್ರಿಪದಿಗಳಲ್ಲಿ ಕಾವ್ಯ ರಚಿಸಿದ್ದರೂ ತ್ರಿಪದಿಗಳಿಗೆ ನಿಜವಾದ ಹೆಸರು ತಂದವ ಸರ್ವಜ್ಞ.
'ತ್ರಿಪದಿ ಬ್ರಹ್ಮ' , ತ್ರಿಪದಿ ಸಾಮ್ರಾಜ್ಯದ ಸಾರ್ವಭೌಮ' ಎಂಬ ಬಿರುದಾಂಕಿತನಾದ, ತನ್ನ ಜ್ಞಾನದ ಉಕ್ತಿಗಳಿಂದ , ದೇಶ ಸುತ್ತಿದ ಅನುಭಾವಿ ಕವಿ ನಮ್ಮ ಸರ್ವಜ್ಞ. ಕಾವ್ಯನಾಮವೇ ಸರ್ವಜ್ಞ ಎಂದು ತಿಳಿದಾದ ಮೇಲೆಯೇ ವಚನಗಳೆಂದು ಒಪ್ಪಿದವರು ನಾವು. ಅಕ್ಕಮಹಾದೇವಿ ಯ 'ಯೋಗಾಂಗ ತ್ರಿವಿಧಿ' ಕನ್ನಡದ ಮೊದಲ ತ್ರಿಪದಿ ಕಾವ್ಯವಾಗಿದೆ.ತರುವಾಯ ಹಲವರು ಹಲವಾರು ತ್ರಿಪದಿ ಕೃತಿ ರಚಿಸಿದರಾದರೂ ತ್ರಿಪದಿ ಎಂದಾಗ ಸರ್ವಜ್ಞ ; ಸರ್ವಜ್ಞ ಎಂದಾಗ ತ್ರಿಪದಿ ಎನ್ನುವಂತಹ ಜನಜನಿತವಾದ ವಚನಗಳು ರಚನೆಯಾಗಿದ್ದು ವರಕವಿಯ ಹೆಗ್ಗುರುತಾಗಿ ಉಳಿದಿದೆ. 'ಆಡು ಮುಟ್ಟದ ಸೊಪ್ಪಿಲ್ಲ : ಸರ್ವಜ್ಞನಾಡದ ಮಾತಿಲ್ಲ' ಎಂಬಂತೆ ಸರ್ವಜ್ಞನ ವಚನಗಳಿಗೆ ವಸ್ತುವಾಗದ ವಿಷಯಗಳೆ ಇಲ್ಲವೆನ್ನಬಹುದು. ವಚನಗಳು ಅವನ ಅನುಭವ - ಅನುಭಾವದ ರಚನೆಗಳಾಗಿವೆ. ತಾನು ಲೋಕಸಂಚಾರಿಯಾದಾಗ ಕಣ್ಣಿಗೆ ಕಂಡ , ತಾನು ಕೇಳಿದ , ತನ್ನ ಚಿಂತನೆಯ ನಡೆಯಲ್ಲಿ ಮೂಡಿದ ಪದಗಳನ್ನೇ ಪದವಾಗಿಸಿದ್ದಾನೆ.
ಸರ್ವಜ್ಞನು ಬರೆದಿರುವ ಎಲ್ಲಾ ವಚನಗಳು ಲಭ್ಯವಾಗಿಲ್ಲವೆಂದೇ ಹೇಳುವರು.ಅವನ ನುಡಿಗಳೆಲ್ಲಾ ಬರವಣಿಗೆಯ ನೆಲೆ ಕಂಡುಕೊಂಡಿದ್ದರೆ ಎಲ್ಲವೂ ಲಭ್ಯವಿರುವ ಸಾಧ್ಯತೆ ಹೆಚ್ಚಾಗುತ್ತಿತ್ತು.ಆದರೂ ಸಂಗ್ರಹಕಾರರು ಹಲವಾರು ವಚನಗಳ ಸೆಲೆ ಹುಡುಕಿ ಜೀವಂತವಾಗಿರಿಸಿದ್ದಾರೆ.ಅವನ ಒಂದು ತ್ರಿಪದಿಗೆ ಹೋಲಿಸಿದರೆ ಅವುಗಳ ಸಂಖ್ಯೆ ಕಡಿಮೆಯೇ ಎನ್ನಬಹುದು , ಕಾರಣ ಒಂದು ತ್ರಿಪದಿಯಂತೆ
"ಏಳು ಕೋಟಿಯ ಕೋಟಿ, ಏಳು ಲಕ್ಷದ ಲಕ್ಷ
ಏಳು ಸಾವಿರದ ಎಪ್ಪತ್ತು ವಚನಗಳನ್ನು
ಹೇಳಿದನು ಕೇಳಾ ಸರ್ವಜ್ಞ "
ಅವನು ನುಡಿದಿರಬಹುದಾದ ತ್ರಿಪದಿ ನುಡಿಮುತ್ತುಗಳು ಜನಪದಗಳ ಹಾಗೆ ಬಳಕೆಯಾಗಿ ಕಾಲಾಂತರದಲಿ ತೆರೆಮರೆಗೆ ಜಾರಿರಲೂಬಹುದಾಗಿದೆ.
ಸರ್ವಜ್ಞನ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ತಿಳಿದಿರುವಂತೆ ನಾನೂ ಕೂಡಾ ಓದುಗನಾಗಿ ವಿಷಯಜ್ಞಾನ ಹೊಂದಿದ್ದೇನೆ.ಆದರೆ ನಾನೀಗ ಅವನೂರಿನವನಾಗಿ (ಹಿರೇಕೆರೂರು) ಹೇಳಹೊರಟಿರುವುದು ಸರ್ವಜ್ಞನನ್ನು ನಮ್ಮಲ್ಲಿ ನಮ್ಮವನೆಂದು ಮೆರೆದಾಡಿದ ಬಗ್ಗೆ , ಅಂಬಲೂರ ಲಿ (ಅಬಲೂರು) ಶಿವನ ವರಪ್ರಸಾದವಾಗಿ ಜನಿಸಿದ ' ಪುಷ್ಪದತ್ತ ಅಥವಾ ಗುಂಡಪ್ಪ' ಅಂದರೆ ಸರ್ವಜ್ಞನ ಜನ್ಮಸ್ಥಾನದ ಬಗ್ಗೆ.ಅದಕ್ಕೆ ಪೂರಕವಾಗಿ ಈ ಭಾವಚಿತ್ರವನ್ನೊಮ್ಮೆ ಗಮನಿಸಿ , ಯೋಚಿಸಿ ಇದು ವರಕವಿಯ ಜನ್ಮಸ್ಥಳವೇ ಎಂದು?
#ಸನ್ನಡೆ#


