ಸದ್ಯ ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಈಗಾಗಲೇ ಅನೇಕ ಮತದಾರರು ತಮ್ಮ ವಿವರಗಳನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ತಮ್ಮ ವಿವರಗಳು ಸರಿಯಾಗಿ ನೋಂದಣಿಯಾಗಿವೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಕೆಲವರಿದ್ದಾರೆ.ಅಂತಹವರು ಯಾವುದೇ ಇಂಟರ್ನೆಟ್ ಇಲ್ಲದೆಯೇ, ಕೇವಲ ಒಂದು ಎಸ್‌ಎಂಎಸ್ (SMS) ಕಳುಹಿಸುವ ಮೂಲಕ ತಮ್ಮ ಮೊಬೈಲ್ ನಲ್ಲೇ ಸ್ಥಿತಿಯನ್ನು (Status) ಕ್ಷಣಾರ್ಧದಲ್ಲಿ ಪರಿಶೀಲಿಸಿಕೊಳ್ಳಬಹುದು.
ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಪರಿಶೀಲಿಸಲು ಸರಳ ಮಾರ್ಗಗಳು ಇಲ್ಲಿವೆ:
1. ಎಸ್‌ಎಂಎಸ್ (SMS) ಮೂಲಕ ಪರಿಶೀಲಿಸುವುದು ಹೇಗೆ?
ನಿಮ್ಮ ಮೊಬೈಲ್ನ ಮೆಸೇಜ್ ಬಾಕ್ಸ್ ತೆರೆದು 1950 ಸಂಖ್ಯೆಗೆ ಎಸ್ ಎಂ ಎಸ್ ಕಳುಹಿಸಬೇಕಾಗುತ್ತದೆ.
ಮೆಸೇಜ್ ಟೈಪ್ ಮಾಡುವಾಗ: ECI ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು, ನಿಮ್ಮ EPIC ಸಂಖ್ಯೆಯನ್ನು ನಮೂದಿಸಿ.
(ಉದಾಹರಣೆಗೆ: ECI UTQ0777245)
ಎಸ್‌ಎಂಎಸ್ ಕಳುಹಿಸಿದ ತಕ್ಷಣ ಚುನಾವಣಾ ಆಯೋಗದಿಂದ ಪ್ರತ್ಯುತ್ತರ ಸಂದೇಶ ಬರಲಿದೆ.
ಗಮನಿಸಿ: ನಿಮ್ಮ ಹೆಸರು, ಸೀರಿಯಲ್ ಸಂಖ್ಯೆ ಮತ್ತು ಕ್ಷೇತ್ರದ ಹೆಸರು ಒಳಗೊಂಡ ಎಸ್‌ಎಂಎಸ್ ಬಂದರೆ ನಿಮ್ಮ ಎಸ್‌ಐಆರ್ (SIR) ನೋಂದಣಿ ಯಶಸ್ವಿಯಾಗಿದೆ ಎಂದರ್ಥ. ಒಂದು ವೇಳೆ ಪ್ರಕ್ರಿಯೆಯಲ್ಲಿದ್ದರೆ (In Process), ನಿಮ್ಮ ವಿವರಗಳು ಸಲ್ಲಿಕೆಯಾಗಿವೆ ಮತ್ತು ಶೀಘ್ರದಲ್ಲೇ ನೋಂದಣಿ ಪೂರ್ಣಗೊಳ್ಳಲಿದೆ ಎಂಬ ಸಂದೇಶ ಬರಲಿದೆ.
ವಿವರಗಳು ಬಾರದಿದ್ದರೆ ಏನು ಮಾಡಬೇಕು?
ಒಂದು ವೇಳೆ ಎಸ್‌ಎಂಎಸ್ ಬಾರದಿದ್ದರೆ ನೋಂದಣಿಯಾಗಿಲ್ಲ ಎಂದು ತಕ್ಷಣಕ್ಕೆ ತೀರ್ಮಾನಿಸಬೇಡಿ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಇಪಿಐಸಿ (EPIC) ಸಂಖ್ಯೆಯನ್ನು ಯಾವುದೇ ತಪ್ಪಿಲ್ಲದೆ ಟೈಪ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೆಟ್ವರ್ಕ್ ಸಮಸ್ಯೆಯಿಂದಲೂ ಸಂದೇಶ ತಡವಾಗಬಹುದು. ಏನೇ ಅನುಮಾನಗಳಿದ್ದರೂ ನಿಮ್ಮ ಪ್ರದೇಶದ ಬಿಎಲ್‌ಒ (BLO) ಅಥವಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದು.
2. ವೆಬ್ಸೈಟ್ ಮೂಲಕ ಪರಿಶೀಲಿಸುವ ವಿಧಾನ
ಮೊದಲಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ voters.eci.gov.in ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣಿಸುವ 'Fill Enumeration Form' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನೀವು ಹೊಸಬರಾಗಿದ್ದರೆ 'Sign Up' ಮಾಡುವ ಮೂಲಕ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಕ್ಯಾಪ್ಚಾ ನಮೂದಿಸಿ ಖಾತೆ ತೆರೆಯಿರಿ.
ಈಗಾಗಲೇ ಖಾತೆ ಹೊಂದಿರುವವರು ಮೊಬೈಲ್ ಸಂಖ್ಯೆ, ಪಾಸ್ ವರ್ಡ್ ಅಥವಾ OTP ಬಳಸಿ ಲಾಗಿನ್ ಆಗಿ.
ಲಾಗಿನ್ ಆದ ನಂತರ ಮತ್ತೆ 'Fill Enumerator Form' ಆಯ್ಕೆಯನ್ನು ತೆರೆದು, ನಿಮ್ಮ ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆಯನ್ನು ನಮೂದಿಸಿ ಸರ್ಚ್ ಮಾಡಿ.
ತಕ್ಷಣವೇ ನಿಮ್ಮ SIR ಫಾರ್ಮ್ನ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.
ಬಿಎಲ್‌ಒ (BLO) ಅವರನ್ನು ಸಂಪರ್ಕಿಸುವುದು ಹೇಗೆ?
ನಿಮ್ಮ ವ್ಯಾಪ್ತಿಯ ಬಿಎಲ್‌ಒ ಜೊತೆ ಮಾತನಾಡಬೇಕಿದ್ದರೆ, ಅದೇ ವೆಬ್ಸೈಟ್ನಲ್ಲಿ "Book a Call with BLO" ಆಯ್ಕೆಯನ್ನು ಬಳಸಿ. ಅಲ್ಲಿ ನಿಮ್ಮ ಮತದಾರರ ಐಡಿ ಮತ್ತು ಕ್ಯಾಪ್ಚಾ ನಮೂದಿಸಿದರೆ, ನಿಮ್ಮ ಬಿಎಲ್‌ಒ ಹೆಸರು ಹಾಗೂ ಮೊಬೈಲ್ ಸಂಖ್ಯೆ ಲಭ್ಯವಾಗುತ್ತದೆ. ಅವರೊಂದಿಗೆ ನೇರವಾಗಿ ಮಾತನಾಡಿ ಮಾಹಿತಿ ಪಡೆಯಬಹುದು.
