ಕರಡಿ ಕುಣಿತ - ದ ರಾ ಬೇಂದ್ರೆ - 5 ನೇ ತರಗತಿ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು 

ಕಂಬಳಿ ಹೊದ್ದಾಂವ ಬಂದಾನ! 

ಗುಣುಗುಣುಗುಟ್ಟುತ ಕಡಗವ ಕುಟ್ಟುತ 

ಕರಡಿಯನಾಡಿಸುತ ನಿಂದಾನ!


ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ 

ಜಾಂಬವಂತನ ಹಿಡಿದು ತಂದಾನ? 

'ಧಣಿಯರ ಮನಿಮುಂದ ಕಾವಲು ಮಾಡಣ್ಣ 

ಧಣಿ ದಾನ ಕೊಡುವನು' ಅಂದಾನ.



ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ 

ಕಲಿಯುಗದ ಕಲೀನ ಕಂಡಾನ.

ಜಾಂಬು ನದಿ ದಂಡೆಯ ಜಂಬುನೇರಲ ಹಣ್ಣು 

ಕೃತಯುಗದ ಕೊನೆಗೀಂವಾ ಉಂಡಾನ.



ಬಂದಾರೆ ಬರೆವ್ವ, ಕಂದನ ತರೆವ್ವ

ಅಂಜೀಕಿ ಗಿಂಜೀಕಿ ಕೊಂದಾನ.

ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ 

ಕೊರಳಾಗ ಕಟ್ಟಿರಿ ಒಂದಾನ.



'ಕುಣಿಯಲೆ ಮಗನೆ ನೀ' ಅನ್ನೊದೊಂದೇ ತಡ 

ತನ್ನssನ ತಾನನ ತಂದಾನ.

ಮುದ್ದುಕೂಸಿನ ಹಾಂಗ ಮುಸುಮುಸು ಮಾಡುತ್ತ 

ಕುಣಿದಾನ ಕುಣತ್ನssವ ಛಂದಾನ.



ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು, 

ನಡೆದಾನ ಪಡೆದಾನ ಬಂದ್ಘಾsನ,

'ಕುಣಿಸುವವರ ಹೊಟ್ಟಿ ತಣ್ಣಗಾಗಲಿ' ಎಂದು 

ಮುಗಿಲಿಗೆ ಕೈಮುಗಿದು ನಿಂದಾನ.



ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ 

ಪ್ರಾಣದ ಈ ಪ್ರಾಣಿ ಹಿಂದಾನ, 

ಕರಡಿಯ ಹೆಸರೀಲೆ ಚರಿತಾರ್ಥ ನಡಿಸ್ಯಾನ 

ಪರಮಾರ್ಥ ಎಂಬಂತೆ ಬಂದಾನ.


ಈ ಮನಷಾ ಎಂದೆಂದೂ ಕವಲೆತ್ತು ಕೋಡಗ 

ತನಗಾಗಿ ಕುಣಿಸುತ್ತ ನಡದಾನ.

ಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ 

ಮಿಗಿಲಹುದು ಕವಿ ಕಂಡು ನುಡಿದಾನ.


       ದ.ರಾ.ಬೇಂದ್ರೆ