ತುಳಸಿ ಹಬ್ಬ 2024


       ತುಳಸಿ ಹಬ್ಬವು ದೀಪಾವಳಿ ಹಬ್ಬದಷ್ಟೇ ಸಂಭ್ರಮ ತರುವ ಕಾರ್ತಿಕ ಮಾಸದ ಮತ್ತೊಂದು ಹಬ್ಬ. ಸಾಮಾನ್ಯವಾಗಿ ಹಿಂದೂಗಳು ತಮ್ಮ ಮನೆ ಮುಂದಿರುವ ತುಳಸಿ ಕಟ್ಟೆಯನ್ನು ಅಲಂಕರಿಸಿ, ರಂಗೋಲಿ ಹಾಕಿ, ನೂರಾರು ದೀಪ ಹಚ್ಚಿ ಬಹಳ ಸಂತೋಷ ಸಂಭ್ರಮದಿಂದ ಪೂಜಿಸಿ ಆಚರಿಸುವುದೇ ಈ ಹಬ್ಬದ ದಿನದ ವಿಶೇಷ.  ಬಾಳೆದಿಂಡಿಟ್ಟು, ಹಸಿರು ಮಾವಿನ ಎಲೆ, ಚೆಂಡು ಹೂಗಳಿಂದ ಅಲಂಕೃತವಾದ ತುಳಸಿ ಅಂದು ನೈಜ ವಧುವಿನಂತೆಯೇ ಕಂಗೊಳಿಸುತ್ತಾಳೆ.


      ಚಾಂದ್ರಮಾನ ಕಾರ್ತಿಕಮಾಸ ಶುಕ್ಲ ಪಕ್ಷದ 12 ನೇ ದಿನ, ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.  ಇದಕ್ಕೆ ಉತ್ಥಾನ ದ್ವಾದಶಿ ಎಂದೂ ಕರೆಯುತ್ತಾರೆ. ಈ ಹಬ್ಬದ ದಿನ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವುದು ನಮ್ಮ ಸಂಪ್ರದಾಯ. ಅಂದು ಉಪವಾಸವಿದ್ದು, ಪೂಜೆ ಮಾಡುವುದು ಮತ್ತೊಂದು ವಿಶೇಷ. 


         ಸಾಮಾನ್ಯವಾಗಿ ಮುತ್ತೈದೆಯರು ಅಥವಾ ಯುವತಿಯರು ತುಳಸಿಯನ್ನು ಪೂಜಿಸುತ್ತಾರೆ. ಈ ತುಳಸಿ ಪೂಜೆಗೆ ಅಥವಾ ತುಳಸಿ ಹಬ್ಬಕ್ಕೆ ತುಳಸಿ ವಿವಾಹ ಎಂದೂ ಹೇಳುತ್ತಾರೆ.


ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ ||

ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||

ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ ||

ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||


        ಈ ಪೂಜೆಗೂ ಪೌರಾಣಿಕ ಹಿನ್ನೆಲೆ ಇದೆ. ಅದೇನೆಂದರೆ ವೃಂದಾ ಎನ್ನುವ ಹೆಣ್ಣುಮಗಳೊಬ್ಬಳು ಮಹಾವಿಷ್ಣುವಿನ ಪರಮ ಭಕ್ತೆಯಾಗಿರುತ್ತಾಳೆ. ಈಕೆಯ ತಪೋ ಶಕ್ತಿಯಿಂದ ಮಹಾನ್ ಶಕ್ತಿಶಾಲಿಯಾಗಿದ್ದ ಇವಳ ಪತಿ, ದುಷ್ಟ ರಾಜನಾಗಿದ್ದ ಜಲಂಧರ ಎಲ್ಲರಿಗೂ ಕಿರುಕುಳ ನೀಡುತ್ತಿರುತ್ತಾನೆ. ದಿನದಿಂದ ದಿನಕ್ಕೆ ಈತನ ಕಾಟ ಹೆಚ್ಚುತ್ತದೆ. ಇದನ್ನು ತಾಳಲಾರದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ಜಲಂಧರನ ವೇಷ ಧರಿಸಿದ ವಿಷ್ಣು, ವೃಂದಾಳ ಪಾತಿವ್ರತ್ಯಕ್ಕೆ ಭಂಗ ತರುತ್ತಾನೆ. ಆಗ ಅತ್ತ ಜಲಂಧರ ರಣರಂಗದಲ್ಲಿ ಮಡಿಯುತ್ತಾನೆ. ವಿಷ್ಣುವಿನ ಕಪಟವನ್ನು ಅರಿತ ವೃಂದಾ, ವಿಷ್ಣುವನ್ನು ಶಪಿಸಿ ತನ್ನ ಪತಿಯೊಂದಿಗೆ ತಾನೂ ಬೂದಿಯಾಗುತ್ತಾಳೆ. ಮರಣದ ನಂತರ ಇದೇ ವೃಂದಾ ಆಮೇಲೆ ಪಾರ್ವತಿಯ ಬೃಂದಾವನದಲ್ಲಿ ತುಳಸಿಯಾಗಿ ಜನ್ಮ ತಾಳಿದಳಂತೆ.


       ನಂತರ  ಇವಳು ರುಕ್ಮಿಣಿಯಾಗಿ ಜನ್ಮ ತಾಳಿ ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವರಿಸಿದಳೆಂಬ ಪ್ರತೀತಿಯೂ ಇದೆ. ಹಾಗಾಗಿ ತುಳಸಿಯೊಂದಿಗೆ ಕೃಷ್ಣನ ವಿಗ್ರಹವಿಟ್ಟು ಈ ದಿನವನ್ನು ತುಳಸಿ ಮದುವೆಯೆಂದೇ ಪೂಜಿಸಲಾಗುತ್ತದೆ.


         ಇನ್ನೊಂದು ಪುರಾಣದ ಪ್ರಕಾರ ದೇವಾನುದೇವತೆಗಳು ಹಾಗೂ ದಾನವರು ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಕಲಶ ಮೇಲೆ ಬಂತಂತೆ. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು  ಹುಟ್ಟಿದ ಗಿಡ ತುಳಸಿಯಂತೆ. ಆಗ ಲಕ್ಷ್ಮೀಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನೆಂದು ಹೇಳಲಾಗುತ್ತದೆ.


         ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆಯಿರುವ ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಕ್ರಿಮಿ - ಕೀಟಗಳು ಮನೆಯೊಳಗೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ಗಿಡಕ್ಕಿದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ಮನೆಯ ಮುಂದೆ ತುಳಸಿ ಕಟ್ಟೆ ಅಥವಾ ತುಳಸಿ ಗಿಡವಿದ್ದು, ಜನರು ಭಯ ಭಕ್ತಿಯಿಂದ ಇದನ್ನು ಪೂಜಿಸುತ್ತಾರೆ.



        ತುಳಸಿ ಗಾಳಿಗೇ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಇದೆಯೆಂದರೆ  ಅದರಲ್ಲಿ ಎಷ್ಟು ಔಷಧೀಯ ಗುಣಗಳಿವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಇಂಥ ಪೌರಾಣಿಕ, ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿ ಪೂಜೆಯನ್ನು ಮಾಡಿ ನಾವೂ ಕೂಡ ಆ ದೇವಿಯ ಕೃಪೆಗೆ ಪಾತ್ರರಾಗೋಣ.