ಹಾಡಬಲ್ಲೆ ನಾನು ಯಾವ ಗೊಡವೆ ಇಲ್ಲದೆ - ವಿನಾಯಕ ಅರಳಸುಳಿ

ಸಾಹಿತ್ಯ:-ವಿನಾಯಕ ಅರಳಸುಳಿ

ಸಂಗೀತ/ಗಾಯನ:-ರಾಘವೇಂದ್ರ ಬೀಜಾಡಿ


ಹಾಡಬಲ್ಲೆ ನಾನು ಯಾವ 

ಗೊಡವೆ ಇಲ್ಲದೆ

ಹಾಡ ಹೊನ್ನಿಗಿಂತ ಚಂದ-

-ದೊಡವೆ ಎಲ್ಲಿದೆ? ||


ಯಾರೂ ಕೇಳದಿರುವ ನೋವ 

ಹಾಡಿಕೊಂಡೆನು

ಯಾರೋ ಮಾಡಿಹೋದ ಗಾಯ 

ನೀವಿಕೊಂಡೆನು.

ತೊರೆದು ಹೋದ ಎಲ್ಲರನ್ನು 

ಕರೆವ ಸಾಲಿದೆ

ಆಡಿ ಮುಗಿದ ಪ್ರೀತಿ ಮಾತು 

ಮತ್ತೆ ಕೇಳಿದೆ.||


ಅಂದು ಅಮ್ಮ ತೂಗಿ ನುಡಿದ 

ಲಾಲಿ ಹಾಡದು

ಇಂದು ನನ್ನ ಕೊರಳಿನಲ್ಲಿ 

ಮುಂದುವರೆದಿದೆ.

ಹಾಡುವಾಗ ಏಕೋ ಕಣ್ಣು 

ತುಂಬಿ ಬಂದಿದೆ

ಹಾಡೆ ನಲ್ಲೆಯಾಗಿ ಬಂದು 

ನನ್ನ ರಮಿಸಿದೆ.||


ಯಾರ ಹಾಡಿನಾಳದಲ್ಲಿ

ಯಾರ ಸ್ಮರಣೆಯೋ?

ದೊರೆತ ಸಾಲು, ಬೆರೆತ ಕೊರಳು

ಯಾರ ಕರುಣೆಯೋ?

ಹರಿದವೆನಿತೋ ಮಧುರ ಭಾವ

ಬಾಳ ನದಿಯಲಿ.

ಉಳಿದುದೊಂದೆ ನೆನಪ ರಾಗ

ಇಂದು ಎದೆಯಲಿ.||