ಶಾಲೆಗಳಲ್ಲಿ ವಾರಕ್ಕೊಂದು ಲೈಬ್ರರಿ ಪೀರಿಯಡ್‌: ಸರ್ಕಾರ ಸೂಚನೆ ಓದುವ ಆಸಕ್ತಿ ಹೆಚ್ಚಿಸಲು ಕೇಂದ್ರದ ಕಾಠ್ಯಕ್ರಮ

 



       ಬಾಲ್ಯದಿಂದಲೇ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ವೃದ್ಧಿಸಲು ಕೇಂದ್ರ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ 'ಓದುವ ಹವ್ಯಾಸ ಜ್ಞಾನದ ವಿಕಾಸ' ಎಂಬ ಕಾರ್ಯಕ್ರಮ ಜಾರಿಗೊಳಿಸಿದೆ.ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ಶಾಲೆಗಳಲ್ಲಿ ವಾರದಲ್ಲಿ ಒಂದು ಗ್ರಂಥಾಲಯ ಅವಧಿ (ಪಿರಿಯಡ್) ನಿಗದಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ. 

     ಪಠ್ಯ ಪುಸ್ತಕಗಳನ್ನು ಓದುವುದರಿಂದ ಮಕ್ಕಳ ಜ್ಞಾನ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸಲು ಸೀಮಿತವಾಗುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆ, ವಿಮರ್ಶಾತ್ಮಕ ಬೆಳವಣಿಗೆ, ಗುಣಮಟ್ಟದ ಸಾಹಿತ್ಯ ಓದುವ ಹವ್ಯಾಸ ಬೆಳೆಸಲು ವಾರಕ್ಕೊಂದು ಗ್ರಂಥಾಲಯ ಅವಧಿ ನಿಗದಿಪಡಿಸಬೇಕು. ಈ ಅವಧಿಯಲ್ಲಿ ಮಕ್ಕಳು ಗ್ರಂಥಾಯದಲ್ಲಿ ತಮ್ಮ ಆಸಕ್ತಿ, ಅಭಿರುಚಿಗೆ ತಕ್ಕ. ಪುಸ್ತಕಗಳನ್ನು ಓದಲು ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಪ್ರತಿ ವರ್ಷ ಶಾಲೆಗಳಿಗೆ ನೀಡುವ ಗ್ರಂಥಾಲಯ ಅನುದಾನ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಓದುವ ಪುಸ್ತಕಗಳನ್ನು ಖರೀದಿಸಬೇಕು. ಯಾವ್ಯಾವ ಪುಸ್ತಕಗಳನ್ನು ಖರೀದಿಸಬೇಕೆಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪಟ್ಟಿ ಪ್ರಕಟಿಸಲಾಗಿದ್ದು, ಅದರ ಅನುಸಾರ ಎಲ್ಲ ಪುಸ್ತಕಗಳು ಶಾಲಾ ಗ್ರಂಥಾಲಯಗಳಲ್ಲಿ ಇರುವಂತೆ ಸಂಬಂಧಿಸಿದ ಮುಖ್ಯ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಇಲಾಖಾ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.