ಸಾಹಿತ್ಯ:-ಕುವೆಂಪು
('ಕೊಳಲು' ಕವನ ಸಂಕಲನದಿಂದ)
ಸಂಗೀತ/ಗಾಯನ:-ಶಿವಮೊಗ್ಗ ಸುಬ್ಬಣ್ಣ
ಹೂವಿನ ಸೊಬಗನು ನೋಡುತ ನೀನು
ಕೋಮಲವೆನ್ನುತ ಮುತ್ತಿಡುವೆ;
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
ಮೊಳಕೆಯ ಗೋಳನು ನೀನರಿಯೆ! ||
ಭುವಿಯನು ನೋಡುತ ಸೊಬಗಿಗೆ ಮೆಚ್ಚಿ,
ಕವಿಯೇ, ಕವಿತೆಯ ವಿರಚಿಸುವೆ;
ಭುವಿಯಾನಂದಕೆ ಜೀವವನಿತ್ತಾ
ಕರ್ತನ ವೇದನೆ ಅರಿತಿಹೆಯ ? ||
ಯುಗ ಯುಗ ಯುಗಗಳ ಯಾತನೆಯಿಂದ
ಜನಿಸಿತು ನಲಿವೀ ಬ್ರಹ್ಮಾಂಡ;
ನಲಿಯುವ ಒಂದೊಂದಲರಿನ ಹೃದಯದಿ
ಬ್ರಹ್ಮವು ಮೌನದಿ ನರಳುತಿದೆ! ||
ಮುಂದಕೆ ನೋಡುವ ಕವಿಗಳ ಕಣ್ಣಿಗೆ
ಬ್ರಹ್ಮವು ಹರ್ಷದಿ ಕುಣಿಯುತಿದೆ;
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ
ಯಾತನೆಯಿಂದದು ಹೊರಳುತಿದೆ! ||