ಶಿಕ್ಷಕರ ನೇಮಕ ಸುಪ್ರೀಂ ತಡೆ ತೆರವು
ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಗೊಂದಲಕ್ಕೆ ತೆರೆ ಬಿದ್ದಿದೆ. 6ರಿಂದ 8ನೇ ತರಗತಿ ನಡೆಸಲಾದ ನೇಮಕಾತಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಹೀಗಾಗಿ ವಿವಾಹಿತ ಅಭ್ಯರ್ಥಿಗಳ ವಿಚಾರದಲ್ಲಿ ತಂದೆ ಅಥವಾ ಪತಿಯ ಪೈಕಿ ಯಾರ ಆದಾಯ ಪ್ರಮಾಣಪತ್ರ ಪರಿಗಣಿಸಬೇಕೆಂಬ ಗೊಂದಲಕ್ಕೆ ಪ್ರತಿಯಾಗಿ ಹಿಂದಿನ ನಿಯಮಗಳ ಪ್ರಕಾರ ಮುಂದುವರಿಸುವಂತೆ ಸೂಚನೆ ನೀಡಿದೆ. ಪ್ರಸ್ತುತ 15 ಸಾವಿರ ಶಿಕ್ಷಕರಲ್ಲಿ 13,352 ಮಂದಿ ಆಯ್ಕೆಯಾಗಿದ್ದಾರೆ. ಕೆಲವರಿಗೆ ನೇಮಕಾತಿ ಆದೇಶ ನೀಡಬೇಕಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ಇದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ್ದು, ಹಿಂದಿನ ನಿಯಮಗಳ ಪ್ರಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಸೂಚನೆ ನೀಡಿದೆ.
ಶಿಕ್ಷಕರ ನೇಮಕಾತಿಯಲ್ಲಿ ಆದಾಯ ಪ್ರಮಾಣ ಪತ್ರದ ವಿಚಾರವಾಗಿ ಮದುವೆಯಾಗಿರುವ ಹುದ್ದೆ ಆಕಾಂಕ್ಷಿಗಳು ತಂದೆ ಅಥವಾ ಪತಿ ಇಬ್ಬರಲ್ಲಿ ಯಾರ ಆದಾಯದ ಪ್ರಮಾಣ ಪತ್ರ ನೀಡಬೇಕೆಂಬ ಗೊಂದಲದ ವಿಚಾರವಾಗಿ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಹಿಂದಿನ ನಿಯಮಗಳಂತೆ ಪಕ್ರಿಯೆ ಮುಂದುವರಿಸುವಂತೆ ತಿಳಿಸಿ ವಿಚಾರಣೆಯನ್ನು ಮುಂದೂಡಿದೆ. ಸುಪ್ರೀಂ ತೀರ್ಪಿನಿಂದಾಗಿ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸದ ಕಾರಣ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕರು ಆದೇಶ ಪ್ರತಿ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಪ್ರಕರಣದ ಹಿನ್ನೆಲೆ: ಶಾಲಾ ಶಿಕ್ಷಣ ಇಲಾಖೆಯು 2023ರ ನವೆಂಬರ್ 'ನಿಂದಲೇ ನೇಮಕಾತಿ ಆದೇಶ ಪತಿಯನ್ನು ಅರ್ಹರಿಗೆ ವಿತರಣೆ ಮಾಡುತ್ತಿದೆ. 15 ಸಾವಿರ ಶಿಕ್ಷಕರಲ್ಲಿ 13,352 ಮಂದಿ ಆಯ್ಕೆಯಾಗಿದ್ದರು. ವಿವಾಹಿತ ಮಹಿಳೆಯರು ತಂದೆಯ ಆದಾಯ ಪ್ರಮಾಣಪತ್ರ ನೀಡಿ ನೇಮಕವಾಗಿರುವುದನ್ನು ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಬಗೆಹರಿಯದ ಗೊಂದಲ: ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳಿಗೆ ತಂದೆ ಅಥವಾ ಪತಿಯಲ್ಲಿ ಯಾರ ಪ್ರಮಾಣಪತ್ರವನ್ನು ಸ್ವೀಕರಿಸಬೇಕು ಎಂಬ ಗೊಂದಲ ಇನ್ನೂ ಮುಗಿದಿಲ್ಲ. ಇದು ಕೇವಲ ಈ ಪ್ರಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ಹುದ್ದೆ ಭರ್ತಿಗಳಿಗೂ ಅನ್ವಯಿಸಲಿದೆ. ಹೀಗಾಗಿ, ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪು ಅಂತಿಮವಾಗಲಿದೆ.