Sslc preparation for exams...

 SSLC ವಿದ್ಯಾರ್ಥಿಗಳೇ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ ....


ಪ್ರಿಯ ವಿದ್ಯಾರ್ಥಿಗಳೆ, ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಒಂದನೆಯ ತರಗತಿಯಿಂದ ಒಂಬತ್ತನೆಯ ತರಗತಿವರೆಗೆ ನಿಮಗೆ ಆಸಕ್ತಿ ಇರಲಿ, ಇಲ್ಲದಿರಲಿ ಅನಿವಾರ್ಯವಾಗಿ ಓದಬೇಕಾಗಿರುತ್ತದೆ. ಆದರೆ ಎಸ್ಎಸ್ಎಲ್ಸಿ ನಿಮ್ಮ ಗುರಿಯನ್ನು ನಿರ್ಣಯಿಸುವ ಹಂತ. ಇದು ನಿಮ್ಮ ವೃತ್ತಿ ಬದುಕಿನ ಬುನಾದಿಯಾಗಿದ್ದು, ಮುಂದೆ ಯಾವ ವೃತ್ತಿಪರ ಕೋರ್ಸ್ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕೆಂಬುದಕ್ಕೆ ಇದು ಪರ್ವಕಾಲ. ಹಾಗಾಗಿ ಪೋಷಕರು, ಶಿಕ್ಷಕರು, ಬಂಧು ಬಳಗದವರು, ನೆರೆಹೊರೆಯವರು ನಿಮ್ಮ ಬಗ್ಗೆ ನಿಮಗಿಂತ ಆಸಕ್ತಿ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೀವು ಪಡೆಯುವ ಅಂಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.


*ಮುಖ್ಯ ಪರೀಕ್ಷೆಗೆ ಮುನ್ನ ಈ ಅಂಶಗಳನ್ನು ಮರೆಯದಿರಿ:-*


👉 ವೇಳಾಪಟ್ಟಿಯನುಸಾರ ಪರೀಕ್ಷೆಯ ವಿಷಯ ಹಾಗೂ ದಿನಾಂಕಗಳನ್ನು ಕ್ಯಾಲೆಂಡರ್ ಅಥವಾ ನಿಮ್ಮ ಸ್ಟಡಿ ರೂಂನಲ್ಲಿ ದೊಡ್ಡದಾಗಿ ನಿಮಗೆ ಕಾಣುವಂತೆ ಬರೆದುಕೊಳ್ಳಿ.


👉 ನಿಮ್ಮ ವಿಷಯವಾರು ಶಿಕ್ಷಕರು ನೀಡಿದ ಹಿಮ್ಮಾಹಿತಿ, ಹಿಂದಿನ ವರ್ಷಗಳ ಪರೀಕ್ಷೆಗಳಲ್ಲಿ ಕೇಳಿದ ಮುಖ್ಯವಾದ ಪ್ರಶ್ನೆಗಳು, ಪ್ರಮುಖ ಅಂಶಗಳನ್ನು ಮತ್ತೊಮ್ಮೆ ಓದಿ ಗ್ರಹಿಸಿ ಮನನ ಮಾಡಿಕೊಳ್ಳಿ.


👉 ಓದಿದ ಎಲ್ಲಾ ಅಂಶಗಳಿಗೆ ಒಂದು ಕಿರು ಟಿಪ್ಪಣಿ ಮಾಡಿಕೊಳ್ಳಿ. ಪರೀಕ್ಷೆಗೆ ಹೋಗುವ ಮುನ್ನ ಅಷ್ಟನ್ನು ಮಾತ್ರ‍್ರ ಕಣ್ಣಾಡಿಸಿದರೆ ಸಾಕು ಉಳಿದ ಅಂಶಗಳು ನೆನಪಾಗುತ್ತವೆ.


👉 ನಿಯಮಿತವಾಗಿ ಊಟ, ತಿಂಡಿ ತೆಗೆದುಕೊಳ್ಳದೆ ನಿದ್ರೆಗೆಟ್ಟು ಓದುವುದನ್ನು ನಿಲ್ಲಿಸಿ. ಸಹಜವಾಗಿರಿ. 


👉 ಪರೀಕ್ಷೆಯ ಹಿಂದಿನ ದಿನವೇ ಎಲ್ಲಾ ತಯಾರಿ ನಿಮ್ಮದಾಗಿರಲಿ. ಪೋಷಕರ ಕಾಳಜಿ ಬಗ್ಗೆ ಬೇಸರಿಸದಿರಿ. ನಗುತ್ತಲೆ ನೀವೆ ಪೂರ್ವಸಿದ್ಧತೆ ಮಾಡಿಕೊಳ್ಳಿ. ಪ್ರವೇಶ ಪತ್ರ ಹಾಗೂ ಪರೀಕ್ಷೆಗೆ ಬೇಕಾಗುವ ಎಲ್ಲಾ ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಂಡಲ್ಲಿ ಮರುದಿನ ಪರೀಕ್ಷೆಗೆ ನಿರಾತಂಕವಾಗಿ ಹೋಗಿ ಬರಲು ಸಾಧ್ಯವಾಗುತ್ತದೆ.


👉 ಪರೀಕ್ಷೆಯ ದಿನ ಬೆಳಿಗ್ಗೆ ಬೇಗ ಎದ್ದು ಪರೀಕ್ಷೆಗೆ ತಗೆದುಕೊಂಡು ಹೋಗಬೇಕಾದ ಎಲ್ಲಾ ಸಾಮಗ್ರಿಗಳನ್ನು ಇಟ್ಟುಕೊಂಡಿರುವ ಬಗ್ಗೆ ಖಾತ್ರಿಮಾಡಿಕೊಂಡು, ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಕೇಂದ್ರ ತಲುಪುವಂತೆ ನೋಡಿಕೊಳ್ಳಿ. ಕೊನೆಯ ಹಂತದಲ್ಲಿ ಗಡಿಬಿಡಿ ಮಾಡಿಕೊಂಡು ಅಪಘಾತಗಳಿಗೆ ತುತ್ತಾಗದಂತೆ ಎಚ್ಚರ ವಹಿಸಿ.


👉 ಹಿಂದಿನ ದಿನ ಲಘು ಆಹಾರ ಸೇವಿಸಿ (ಜೀರ್ಣಕ್ರಿಯೆಗೆ ಅನುಕೂಲವಾಗುವಂತೆ) ಹೆಚ್ಚು ಮಸಾಲೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ತಂಪು ಪಾನಿಯಗಳ ಸೇವನೆ ಮಾಡದಿರಿ. ಸಾಕಷ್ಟು ನೀರು ಕುಡಿಯಿರಿ.


👉 ಪರೀಕ್ಷೆಗೆ ಹೊರಡುವ ಮುನ್ನ ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ. ತಂದೆ ತಾಯಿ ಹಾಗೂ ಗುರು ಹಿರಿಯರಿಂದ ಆಶೀರ್ವಾದ ಪಡೆಯುವುದನ್ನು ಮರೆಯದಿರಿ.




👉 ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಲಿ. ಬೇರೆಯವರು ಏನು ಓದಿದ್ದಾರೆ? ಎಷ್ಟು ಓದಿದ್ದಾರೆ ಎಂಬುದರ ಬಗ್ಗೆ ಕೆಟ್ಟ ಕುತೂಹಲ ಬೇಡ. ನಿಮ್ಮ ತಯಾರಿಯ ಬಗ್ಗೆ ನಿಮಗೆ ನಂಬಿಕೆಯಿರಲಿ.


👉 ಪರೀಕ್ಷಾ ಕೇಂದ್ರ ತಲುಪಿದ ನಂತರ ನಿಮ್ಮ ನೋಂದಣಿ ಸಂಖ್ಯೆಯು ಯಾವ ಕೊಠಡಿಯಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರದವರು ನೀಡುವ ಸೂಚನೆಗಳನ್ನು ಆಲಿಸಿ ಕೊಠಡಿ ಪ್ರವೇಶಿಸಿ.


👉 ಕೊಠಡಿ ಪ್ರವೇಶಿಸಿದ ನಂತರ ಗಡಿಬಿಡಿ ಮಾಡಿಕೊಳ್ಳದೆ, ನಿಮ್ಮ ನೋಂದಣಿ ಸಂಖ್ಯೆ ಇರುವ ಜಾಗದಲ್ಲಿಯೇ ನೀವು ಆಸೀನರಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.




👉 ನಿಮ್ಮ ಸ್ಥಳದಲ್ಲಿ ಕುಳಿತ ನಂತರ ಸಮಾಧಾನವಾಗಿ ದೀರ್ಘ ಉಸಿರನ್ನು ತಗೆದುಕೊಂಡು, ಹಾಲ್ ಟಿಕೆಟ್, ಲೇಖನ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ್ಳಿ. ಕೊಠಡಿ ಮೇಲ್ವಿಚಾರಕರು ನೀಡುವ ಪ್ರತಿಯೊಂದು ಸೂಚನೆಗಳನ್ನು ಸ್ಪಷ್ಟವಾಗಿ ಆಲಿಸಿ. ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದೆ ನಿಧಾನವಾಗಿ ಹಾಲ್ ಟಿಕೆಟ್ ನಲ್ಲಿರುವಂತೆ ಬರೆಯಿರಿ.


👉 ಪ್ರಶ್ನೆ ಪತ್ರಿಕೆ ನೀಡಿದ ನಂತರ ಎಲ್ಲಾ ಪ್ರಶ್ನೆಗಳನ್ನು ಒಮ್ಮೆ ಸಮಾಧಾನವಾಗಿ ಓದಿಕೊಂಡು. ನಿಮಗೆ ಉತ್ತರ ಗೊತ್ತಿರುವ ಮುಖ್ಯ ಪ್ರಶ್ನೆ ಸಂಖ್ಯೆ ಉಪ ಪ್ರಶ್ನೆ ಸಂಖ್ಯೆಯನ್ನು ಕ್ರಮವಾಗಿ ಬರೆದು ನಿಧಾನವಾಗಿ ಉತ್ತರಿಸಿ. ಮುಖ್ಯಾಂಶಗಳಿಗೆ ಅಡಿಗೆರೆ ಎಳೆಯುವುದನ್ನು ಮರೆಯದಿರಿ.




👉 ಪರೀಕ್ಷೆ ಬರೆಯುವಾಗ ಕೆಲವು ಪ್ರಶ್ನೆಗಳಿಗೆ ಉತ್ತರ ತಕ್ಷಣ ತೋಚದಿದ್ದಲ್ಲಿ ಮುಂದಿನ ಪ್ರಶೆಗಳಿಗೆ ಉತ್ತರಿಸಿ, ಕೊನೆಯಲ್ಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.


👉 ಪರೀಕ್ಷಾ ಕೊಠಡಿಯಿಂದ ಹೊರಬಂದ ನಂತರ ಸ್ನೇಹಿತರೊಂದಿಗೆ, ಹೆಚ್ಚು ಚರ್ಚಿಸದೆ ಹೆಚ್ಚು ಮಾತನಾಡದೆ ಚೆನ್ನಾಗಿ ಉತ್ತರಿಸಿರುವುದಾಗಿ ಉತ್ತರ ನೀಡಿ ಏಕೆಂದರೆ ಋಣಾತ್ಮಕ ಹಿಮ್ಮಾಹಿತಿಗಳು ಮುಂದಿನ ಪ್ರತಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.


👉 ಒಂದಿಷ್ಟು ಪ್ರಶ್ನೆಗಳಿಗೆ ನೀವು ಅಂದುಕೊಂಡಂತೆ ಉತ್ತರಿಸದಿದ್ದಾಗ, ಪರಿತಪಿಸದೆ ಮುಂದಿನ ಪತ್ರಿಕೆಗೆ ಫೋಕಸ್ ಮಾಡಿ.


👉 ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಿರಿ, ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದಿರಿ. ಫಲಿತಾಂಶ ಏನೇ ಬರಲಿ ಅದನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ನಿಮ್ಮದಾಗಿಸಿಕೊಳ್ಳಿ.


*ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಪಾಲನೆ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ.*