ಸರ್ವಜ್ಞ ಜಯಂತಿ - February 20

 


ಕರ್ನಾಟಕ ಕಂಡ ಶ್ರೇಷ್ಠ ವಚನಕಾರ ದಾರ್ಶನಿಕ ಕವಿ, ತ್ರಿಪದಿ ಚಕ್ರವರ್ತಿ, ಸರ್ವಜ್ಞನರ 503 ನೇ ಜಯಂತಿಯ ಶುಭಾಶಯಗಳು.


   ಕನ್ನಡ ಕುಲಕೋಟಿಯ ಹೆಮ್ಮೆಯ ಪುತ್ರ, ತ್ರಿಪದಿ ಕವಿ ಎಂದೇ ಪ್ರಸಿದ್ಧಿ ಪಡೆದು ಸಮಾನತೆ ಸಮಾಜ ಕಟ್ಟಲು ಬಯಸಿದ ಸಂತ ಸರ್ವಜ್ಞ ಕವಿಯು ೧೭ನೇ ಶತಮಾನದ ಆದಿಭಾಗದಲ್ಲಿ ಜನಿಸಿದನೆಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ಧಾರವಾಡ(ಇಂದಿನ ಹಾವೇರಿ) ಜಿಲ್ಲೆಯ ಹಿರೇಕೇರೂರ ತಾಲ್ಲೂಕಿನ (ಅಂಬಲೂರು )ಮಾಸೂರು ಗ್ರಾಮದಲ್ಲಿ ಜನಿಸಿದನು. ಸರ್ವಜ್ಞ ಕವಿಯು ತಾನು ಯಾರೆಂಬುದು ಸಂಕ್ಷಿಪ್ತವಾದ ಪರಿಚಯ ಆತನ ವಚನಗಳಿಂದ ತಿಳಿದು ಬರುತ್ತದೆ.


ತಂದೆ ಕುಂಬಾರಮಲ್ಲ ತಾಯಿ ಮಳಲಾದೇವಿ

ಇಂದು ಶೇಖರನ ವರಪುತ್ರ ಧರಣಿಗೆ

ಬಂದು ಜನಿಸಿದೇನು ಸರ್ವಜ್ಞ


ಶಾಲೆಯ ಮೆಟ್ಟಿಲು ಹತ್ತಿದವನಲ್ಲ, ಪೋಷಕರ ಆಶ್ರಯದಿಂದ ವಂಚಿತನಾಗಿ ಅಕ್ಷರ ಜ್ಞಾನದಿಂದ ವಂಚಿತನಾಗಿ ವಿರಾಗಿಯಾಗಿ ದೇಶ ಸಂಚಾರ ಮಾಡಿದರು, ಆದರೂ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಸಂತ ಕವಿಗಳಲ್ಲಿ ಸರ್ವಜ್ಞ ಕವಿಗೆ ಮೊದಲ ಸ್ಥಾನವಿದೆ. ತನ್ನ ತ್ರಿಪದಿಗಳಲ್ಲಿ ಜಾನಪದ ಸೊಗಡು, ಸರಳ ನಿರೂಪಣೆ ಹಾಗೂ ಮಾನವ ವಿಶ್ವಮಾನವವಾಗಲು ಅವಶ್ಯವಿರುವ ಅದ್ಭುತ ತ್ರಿಪದಿ ವಚನಗಳ ಗಟ್ಟಿ ಸಾಹಿತ್ಯ ಸಂಪತ್ತು ಕನ್ನಡ ಅಕ್ಷರಲೋಕ ಶ್ರೀಮಂತಗೊಳಿಸಿದ ಶ್ರೇಯಸ್ಸು ಸರ್ವಜ್ಞ ಕವಿಗೆ ಸಲ್ಲುತ್ತದೆ.


ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳಗೊಂದು ನುಡಿಗಲಿತು

ವಿದ್ಯೆಯ ಪರ್ವತವೇ ಆದ ಸರ್ವಜ್ಞ


ಅಂದಿನ ಪುಷ್ಪದತ್ತ ಬಂದ ಸರ್ವಜ್ಞ ವರರುಚಿಯಾಗಿ ಮುದವಸಾರೆ ಸರ್ವಜ್ಞನೆಂದೆನಿಸಿ ನಿಂದವನು ನಾನೇ ಸರ್ವಜ್ಞ


ಸರ್ವಜ್ಞ ಕವಿಗೆ ಆತನ ತಾಯಿ ಮಳಲಾದೇವಿ ‘ಪುಷ್ಪದತ್ತ’ ಎಂದು ನಾಮಕರಣ ಮಾಡುತ್ತಾಳೆ. ಮುಂದೆ ಪುಷ್ಪದತ್ತನು ‘ಸರ್ವಜ್ಞ’ ಕಾವ್ಯನಾಮದಿಂದ ಹೇಗೆ ಪ್ರಸಿದ್ಧಿ ಪಡೆದೆ ಎಂಬುದು ಆತನೇ ಹೇಳಿಕೊಂಡಿದ್ದಾನೆ.


ಸಮಾಜದ ಜನರೊಂದಿಗೆ ಬೆರೆತು ಪ್ರೀತಿಯಿಂದ ಎಲ್ಲರಿಂದಲೂ ಒಂದೊಂದು ಅಕ್ಷರ ಕಲಿತು ಜ್ಞಾನ ಸಂಪಾದಿಸಿದ್ದೇನೆ ಹೊರತು ಗರ್ವದಿಂದಾವನಲ್ಲ ಎಂಬುದು ಈ ಮೇಲಿನ ತ್ರಿಪದಿಗಳಿಂದ ಖಚಿತಪಡಿಸುತ್ತಾನೆ. ಬಹುದಿನಗಳಿಂದ ಮೇಲ್ವರ್ಗದ ಶಕ್ತಿಗಳಾದ ಪುರೋಹಿತಶಾಹಿ ವರ್ಗದ ಉಚ್ಚರಿಂದ ಅಂಧಭಕ್ತಿ, ಜಾತಿ, ದೌರ್ಜನ್ಯ, ಶೋಷಣೆ ಹಾಗೂ ಮೌಢತೆಗಳೆಂಬ ಅನಿಷ್ಠ ಪದ್ದತಿಗಳು ಮುನ್ನಡೆಸಿಕೊಂಡು ಆಚರಣೆಗೆ ತಂದು ತಳವರ್ಗದ ಜನರಿಗೆ ವೇದ,ಶಾಸ್ತ್ರ, ಆಗಮ, ಪುರಾಣ, ಹೋಮ, ಹವನಗಳ ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗಿಸಿ ಗುಲಾಮಗಿರಿತನ ಮೆರೆಯುತ್ತಿರುವ ಸಂಪ್ರದಾಯವಾದಿಗಳ ನಡೆ ಸರ್ವಜ್ಞ ಕವಿ ಕಟುವಾಗಿ ಟೀಕಿಸಿ ತನ್ನ ತ್ರಿಪದಿಗಳಿಂದ ಛಾಡಿಸುತ್ತಾನೆ.


ನಡೆವುದೊಂದೆ ಭೂಮಿ ಕುಡಿಯುದೊಂದೆ ನೀರು ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ


ಕುಲಗೋತ್ರಗಳ ನಡುವೆ ಭೇದಭಾವ ಮಾಡುವ ಜಾತಿವಾದಿಗಳಿಗೆ ಪ್ರಶ್ನಿಸುತ್ತಾರೆ.

ಮತ್ತೊಂದು ವಚನದಲ್ಲಿ


ಎಲುವಿನ ಕಾಯಕ್ಕೆ ಸಲೆ ಚರ್ಮದ ಹೊದಿಕೆ

ಮಲ ಮೂತ್ರ ಕ್ರಿಮಿಗಳೊಳಗಿರ್ದ

ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ


ಎಂದು ಕುಲ ಕುಲಗಳ ನಡುವೆ ಭಿನ್ನವೇತಕ್ಕೆ ಎಂದು ಪ್ರಶ್ನಿಸಿ * ಯಾತರ ಹೂವೇನು ನಾತವಿದ್ದರೆ ಸಾಕು, ಶಿವನೊಲಿದಾತನೇ ಜಾತವೆಂದು ಅರಿತುಕೋ ಮರುಳ ಮಾನವ ಎಂದು ನಿರ್ಭೀತಿಯಿಂದ ಎಚ್ಚರಿಸುತ್ತಾನೆ. ಸರ್ವಜ್ಞ ಕವಿಗೆ ವೇದ, ಪುರಾಣ, ಆಗಮ, ಶಾಸ್ತ್ರಗಳ ಮೇಲೆ ನಂಬಿಕೆವಿರಲ್ಲಿಲ್ಲ. ಬಹುದೇವೋಪಾಸನೆ, ಮೂರ್ತಿಪೂಜೆ,ಮೌಢ್ಯತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾನೆ.


ಓದು ವಾದಗಳೇಕೆ ಗಾದಿಯ ಮಾತೇಕೆ

ವೇದ ಪುರಾಣ ನಿನಗೇಕೆ

ಲಿಂಗದಾ ಹಾದಿಯರಿದನಗೆ ಸರ್ವಜ್ಞ


ಮನವಾದಿಗಳ ಜಾಡ್ಯದಿಂದ ಹೊರಬಂದು ವೈಚಾರಿಕತೆ, ವೈಜ್ಞಾನಿಕವಾಗಿ ಬಾಳಲು ಸಲಹೆ ನೀಡುತ್ತಾನೆ. ಗಂಗೆ ಗೋದಾವರಿ ತುಂಗಭದ್ರಗಳಲ್ಲಿ ಮುಳಗಿದರೇನು ಫಲವಯ್ಯಾ? ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆ ತಾ ನಷ್ಟ ಕಾಣಯ್ಯಾ ಎಂದು ಮೂಢ ಆಚರಣೆಗಳು ವಿರೋಧಿಸುತ್ತಾನೆ. ಅಮಾಯಕ ಬಡ ಜನರ ತಲೆಗೆ ಗೊಡ್ಡು ನೇಮ, ನಿಷ್ಠೆಗಳ, ಶಾಸ್ತ್ರಗಳು ಪಠಣ ಮಾಡಿಸಿ ದೈವಭಕ್ತಿಗಿಂತ ದೇವರ ಭಯವೇ ತುಂಬಿ ದೇವರ ಹೇಸರೇಳಿ ಲೂಟಿ ಹೊಡೆಯುವ ಅಂಧಭಕ್ತರಿಗೆ ‘ನಿಷ್ಠೆಯಿಲ್ಲದ ಪೂಜೆ ಹಾಳೂರ ಕೊಟ್ಟಿಗುರಿದಂತೆ ‘ ಚಿತ್ತವಿಲ್ಲದೆ ಗುಡಿ ಸುತ್ತಿದೆಡೆ ಫಲವೇನು ಎತ್ತು ಗಾಣವನು ಹೊತ್ತು ತಾ ಸತ್ತಿಬಂದಂತೆ’ ಎಂದು ಮೌಢ್ಯ ಆಚರಣೆಗಳು ಖಂಡಿಸುತ್ತಾನೆ. ಪುರೋಹಿತಶಾಯಿ ವ್ಯವಸ್ಥೆಯಿಂದ ತಳಸಮುದಾಯದವರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಜಾತಿಯತೆಗಳ ವಿರುದ್ಧ ಸಿಡಿದೇಳುತ್ತಾನೆ.


ಸರ್ವಜ್ಞ ಕವಿಯ ದ್ರಷ್ಟಿಯಲ್ಲಿ ಗುರುವಿಗೆ ಉಚ್ಚ ಸ್ಥಾನದಲ್ಲಿರಿಸಿ ಪೂಜಿಸಿ ಗುರುವಿನ ಮಹತ್ವ ಎತ್ತಿ ಹಿಡಿದಿರಿವುದು ಕಂಡು ಬರುತ್ತದೆ.

ಹೀಗೊಂದು ತ್ರಿಪದಿಗಳಲ್ಲಿ


ಬಂಧುಗಳು ಆದವರು

ಬಂದುಂಡು ಹೋಗುವರು ಬಂಧನವ ಕಳೆಯಲಿಯರಾ ಗುರುವಿಗಿಂತ ಬಂಧಗಳುಂಟೆ ಸರ್ವಜ್ಞ


ಎಂದು ಗುರುವಿಗಿಂತ ದೊಡ್ಡವರು ಮತ್ತ್ಯಾರಿಲ್ಲ ‘ ಗುರುರಾಯ ಬಂಧನವ ಕಳೆವ’ ಎಂದು ಹೇಳುತ್ತಾನೆ. ‘ಜಂಗಮನ ಭಕ್ತನ ನಡೆ ಲೇಸು ಶರಣರ ಸಂಗವೇ ಲೇಸು’ ಎಂದು ಸಕಲ ಜೀವಾತ್ಮರಿಗೂ ಲೇಸು ಬಯಸಿ ಸಜ್ಜನರ ಸಂಗವರಿತ ಶರಣ ಬಳಗ ಬಗ್ಗೆ ತನ್ನ ಅನುಭಾವ ವ್ಯಕ್ತಪಡಿಸುತ್ತಾನೆ. ಸಮಾಜದಲ್ಲಿ ನಾನೇ ಬುದ್ದಿವಂತ, ದೊಡ್ಡಜ್ಞಾನಿ ಪಂಡಿತನೆಂದು ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವರಿಗೆ ‘ಎಲ್ಲರೂ ಬಲ್ಲವರಿಲ್ಲ ಬಲ್ಲವರು ಬಹಳವಿಲ್ಲ’ ‘ ನಾನು ಗರ್ವದಿಂದಾವನಲ್ಲ ಸರ್ವರೋಳಗೊಂದು ನುಡಿಗಳಿತು ನಾ ಸರ್ವಜ್ಞನಾದೇನೆಂಬುದು ಸ್ಪಷ್ಟಪಡಿಸುತ್ತಾನೆ. ಸಾಮಾಜಿಕ ಬದುಕಿನಲ್ಲಿ ಒಳಿತುಮಾಡುವ ಜನರಿಗೆ ಟೀಕಿಸುವವರ ಎಂದು ಗುಂಪು ಇದ್ದೆ ಇರುತ್ತದೆ. ತನ್ನ ಕಾರ್ಯ ತಾ ಮಾಡಲು ಕೈಲಾಗದವ ಮತ್ತೊಬ್ಬರ ಉತ್ತಮ ನಡೆ ಕಂಡು ಒಳಗೊಳಗೆ ಸಂಕಟಪಟ್ಚು ಟೀಕಿಸಲು ಹೆಣಗುತ್ತಾನೆ. ಅಂಥಹ ಮೂರ್ಖರಿಗೆ ತನ್ನ ತ್ರಿಪದಿಗಳಿಂದ ಖಾರವಾಗಿ ಛಾಡಿಸಿದ್ದು ನೋಡಬಹುದು.


ಆನೆ ಬೀದಿಲಿ ಬರಲು ಶ್ವಾನ ತಾ ಬೊಗಳಿತು

ಶ್ವಾನನಂತಾನೆ ಬೊಗಳಿದರೆ

ಆನೆಯ ಮಾನವೇ ಹಾನಿ ಸರ್ವಜ್ಞ.