ಪೆಬ್ರುವರಿ 28, ರಾಷ್ಟ್ರೀಯ ವಿಜ್ಞಾನ ದಿನ

 💐💐💐💐💐💐💐💐

ರಾಷ್ಟ್ರೀಯ ವಿಜ್ಞಾನ ದಿನ




   ಪ್ರತಿ ವರ್ಷ ಫೆಬ್ರವರಿ 28 ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.


     ಸರ್ ಸಿ.ವಿ.ರಾಮನ್, ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು 1930 ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.


🌹ಬಾಲ್ಯ;

ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ 7, 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, ಪಾರ್ವತಿ ಅಮ್ಮಾಳ್. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.


🌹ಶಿಕ್ಷಣ;

     1900 ರಲ್ಲಿ ತಮ್ಮ 12 ನೆ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಮುಗಿಸಿದರು.

      1904 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.

   1907 ರಲ್ಲಿ ಎಂ. ಎಸ್ಸಿ. ಪದವಿ ಪಡೆದರು.

    1907 ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತೆಯಲ್ಲಿ, ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ-ಜೀವನ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.

   1917 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು.

   1924 ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು.

    ಮಾರ್ಚ್ 16, 1928 ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, 1930 ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ' ಗಳಿಸಿದರು.


🌹ವಿವಾಹ;

     ಡಾ. ರಾಮನ್ 6, ಮೇ, 1907 ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬ ಹುಡುಗಿಯೊಂದಿಗೆ ವಿವಾಹವಾದರು. ರಾಮನ್ ಲೋಕಸುಂದರಿ ಅಮ್ಮಾಳ್ ದಂಪತಿಗಳಿಗೆ ಚಂದ್ರಶೇಖರ್  ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.


🌹ಸಂಶೋಧನೆ:

 ರಾಮನ್ ಪರಿಣಾಮ;

ಈ ತತ್ತ್ವವು ವಿಜ್ಞಾನಕ್ಕೆ ಸರ್ ಸಿ.ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.


 🌹 ಟಾಟಾ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾಗಿ;

   1934 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ರಾಮನ್, ತದನಂತರ 1943 ರಲ್ಲಿ ರಾಮನ್ ಸಂಶೋಧನಾ ಕೆಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಪ್ರೊ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು “ರಾಮನ್ ರೀಸರ್ಚ್ ಇನ್ಸ್ಟಿಟ್ಯೂಟ್ ” ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟು ಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ.


 🌹ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು 1928 ರ ಫೆಬ್ರವರಿ 28 ರಂದು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು.

ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


🌹ಪ್ರಶಸ್ತಿಗಳು;

ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924)


ನೈಟ್ ಹುಡ್ ಪ್ರಶಸ್ತಿ (1929)


ನೋಬೆಲ್ ಪ್ರಶಸ್ತಿ (1930)


ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (1935)


ಭಾರತ ರತ್ನ ಪ್ರಶಸ್ತಿ (1954)


ಲೆನಿನ್ ಶಾಂತಿ ಪ್ರಶಸ್ತಿ (1957) ಗಳು ಇವರಿಗೆ ಕೀರ್ತಿ ತಂದಿವೆ.


🌹ನಿಧನ;  

   ನವೆಂಬರ್ 21, 1970 ರಲ್ಲಿ, 'ಪ್ರೊ.ರಾಮನ್' ರವರು, ದೇವನಹಳ್ಳಿಯಲ್ಲಿ ನಿಧನರಾದರು.

  

🙏🙏🙏🙏🙏🙏🙏🙏