ಮಕರ ಸಂಕ್ರಾಂತಿ ಆಚರಣೆ ವಿಶೇಷತೆ.

 ಮಕರ ಸಂಕ್ರಾಂತಿ ಶುಭಾಶಯಗಳು



"ಬಂದಿತು ಬಂದಿತು ಸಂಕ್ರಾಂತಿ ತಂದಿತು ತಂದಿತು ಸುಖಶಾಂತಿ" ಎಂಬ ಕವಿವಾಣಿಯಂತೆ ಸಂಕ್ರಾಂತಿ ಬಂತೆಂದರೆ ಜನರಲ್ಲಿ ನವೋತ್ಸಾಹ ಚಿಮ್ಮುತ್ತದೆ. ಈವರೆಗಿನ ದಕ್ಷಿಣಾಯನದಲ್ಲಿ ಬರುವ ಮಳೆಗಾಲದ ಮಳೆ, ಚಳಿಗಾಲದ ಚಳಿಗಾಳಿಯ ಕೊರೆತದಿಂದ ಬರಡಾದ ಜೀವಕ್ಕೆ, ಕೊರಡಾದ ಗಿಡ-ಬಳ್ಳಿಗಳಿಗೆ, ಸಂಕ್ರಾಂತಿಯು ನವಚೇತನವನ್ನು ತುಂಬುತ್ತದೆ. ವಸಂತದ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಉತ್ತರಾಯಣದ ಹಿತಕರವಾದ ವಾಯುಗುಣ, ಪ್ರಕೃತಿಯ ವಿಕಾಸ-ವಿಲಾಸ, ಸುಗ್ಗಿಯ ಹಿಗ್ಗು, ಆರೋಗ್ಯ-ಭಾಗ್ಯ, ದವಸ-ಧಾನ್ಯಗಳ ತುಂಬಿರುವಿಕೆ ಸಂಕ್ರಾಂತಿಯ ಕಾಲವನ್ನು ಪುಣ್ಯಕಾಲವನ್ನಾಗಿಸಿದೆ.


🚩 ಹಾಗಾದರೆ ಸಂಕ್ರಾಂತಿ ಎಂದರೇನು?


 ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು, ದಕ್ಷಿಣಾಯನ-ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವ ಹೊಂದಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ.


 ‘ಸೂರ್ಯಆತ್ಮಾ ಜಗತಸ್ತಸ್ಥುಷಶ್ಚ' ಎಂಬ ವೇದವಾಣಿಯಂತೆ ಸೂರ್ಯದೇವ ವಿಶ್ವದ ಆತ್ಮ, ಜಗತ್ತಿನ ಕಣ್ಣು. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು, ಸೂರ್ಯನೇ ಕಾರಣ. ಆ ಸವಿತೃದೇವನ ದಿವ್ಯ ತೇಜಸ್ಸು ನಮಗೆ ಸಿದ್ಧಿ-ಬುದ್ಧಿ-ಸಮೃದ್ಧಿಗಳನ್ನು ನೀಡಬಲ್ಲದು.


ಸಾಮಾನ್ಯವಾಗಿ ‘ಪುಷ್ಯ’ ಮಾಸದಲ್ಲಿ ಬರುವ (ಜನವರಿ 14 ಅಥವಾ 15) ಮಕರ ಸಂಕ್ರಾಂತಿಯನ್ನು ‘ಉತ್ತರಾಯಣ ಪುಣ್ಯಕಾಲ’ವೆಂದು*ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವೇ ಅಲ್ಲ, ವ್ಯಕ್ತಿಯ ಮರಣಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ, ಪ್ರಾಣಬಿಡಲು ಉತ್ತರಾಯಣ ಪುಣ್ಯಕಾಲಕ್ಕಾಗಿ ಹರಿಸ್ಮರಣೆ ಮಾಡುತ್ತಾ ಕಾಯುತ್ತಿದ್ದನೆಂದು ಮಹಾಭಾರತದಲ್ಲಿ ಹೇಳಿದೆ. ಈ ಪುಣ್ಯ ಮುಹೂರ್ತದಲ್ಲಿ ಗಂಗಾ, ತುಂಗಾ, ಕೃಷ್ಣ, ಕಾವೇರಿ ಮುಂತಾದ ಪುಣ್ಯ ತೀರ್ಥಗಳಲ್ಲಿ ಲಕ್ಷಾಂತರ ಆಸ್ತಿಕ ಜನರು ತೀರ್ಥಸ್ನಾನ ಮಾಡುತ್ತಾರೆ. ದಕ್ಷಿಣಾಯನದಲ್ಲಿ ಮುಚ್ಚಿದ್ದ ಸ್ವರ್ಗದ ಬಾಗಿಲನ್ನು ಈ ದಿನ ತೆರೆಯುತ್ತಾರಂತೆ. ಅಲ್ಲದೆ ಉತ್ತರಾಯಣವನ್ನು ದೇವತೆಗಳ ಹಗಲು ಕಾಲವೆಂದೂ ಭಾವಿಸಲಾಗಿದೆ. ಆದ್ದರಿಂದ ಯಜ್ಞ-ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯಗಳಿಗೆ, ಶುಭ-ಶೋಭನ ಮಂಗಳ ಕಾರ್ಯಗಳಿಗೆ ಉತ್ತರಾಯಣ ಪುಣ್ಯಕಾಲ ಸರ್ವಶ್ರೇಷ್ಠ.


ಇನ್ನು ಭೌಗೋಳಿಕ ಮಹತ್ವದ ಬಗ್ಗೆ ಅರಿಯಬೇಕೆಂದರೆ, 'ಅಯನ’ ಎಂದರೆ ಚಲಿಸುವುದು ‘ಮಾರ್ಗ’ ಎಂದರ್ಥ. ಈವರೆಗೆ ದಕ್ಷಿಣದತ್ತ ವಾಲಿ ಚಲಿಸುವ ಸೂರ್ಯ, ಮಕರ ಸಂಕ್ರಮಣದಿಂದ ತನ್ನ ಮಾರ್ಗ ಬದಲಿಸಿ, ಉತ್ತರದ ಕಡೆ ವಾಲುತ್ತಾನೆ. ಸೂರ್ಯ ಮೇಲೆ ಏರಿ, ರಾತ್ರಿ ಕುಗ್ಗಿ ಹಗಲು ಹಿಗ್ಗಿದಂತೆ, ನಮ್ಮ ಬಾಳಿನಲ್ಲೂ ಕಾವು ಹೆಚ್ಚುತ್ತದೆ. ಇಂದಿನಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆರಂಭವೆಂದು ಪುರಾಣಗಳು ಹೇಳುತ್ತವೆ. ಈ ಆನಂದದ ಸಂಕೇತವಾಗಿ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿ, ಹೊಸವಸ್ತ್ರ ಧರಿಸಿ, ಪಕ್ವಾನ್ನ ಸವಿದು ಸಂತೋಷಿಸುತ್ತಾರೆ.


ಮಕರ ಸಂಕ್ರಾಂತಿ ಹಬ್ಬವನ್ನು ಕರ್ನಾಟಕದಲ್ಲಿ ಒಂದು ದಿನ, ಇನ್ನು ಕೆಲವೆಡೆ ಎರಡು ದಿನ ಆಚರಿಸಿದರೆ, ತಮಿಳುನಾಡು, ಆಂಧ್ರಗಳಲ್ಲಿ ಈ ಹಬ್ಬವನ್ನು ‘ಪೊಂಗಲ್’ ಎಂಬ ಹೆಸರಿನಿಂದ ಮೂರು ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ಸಂಕ್ರಾಂತಿಯ ಹಿಂದಿನ ದಿನ ‘ಭೋಗಿ ಪೊಂಗಲ್’ ಆಚರಿಸುತ್ತಾರೆ. ಭೋಗಿ ಹಬ್ಬದಲ್ಲಿ ಋತುಗಳ ರಾಜ ಇಂದ್ರನನ್ನು ಪೂಜಿಸಲಾಗುವುದು. ಈ ಹಬ್ಬ ಹೊಸ ಋತು ಆರಂಭವಾಗುತ್ತಿದೆ ಎನ್ನುವುದರ ಸೂಚನೆ. ವರ್ಷದ ಈ ಋತುವಿನಲ್ಲಿ  ಹಳೇ ಎಲೆಗಳು ಉದುರಿ, ಹೊಸ ಎಲೆಗಳು ಮತ್ತು ಹೂಗಳು ಬರುವ ಕಾಲ ಆರಂಭವಾಗುತ್ತದೆ. ಪ್ರಕೃತಿಯಂತೆ ತಮ್ಮ ಜೀವನಕ್ಕೂ ಒಂದು ಹೊಸ ಕಳೆ ಬರಬೇಕೆಂದು ಮಾನವರು ಬಯಸುವರು. ಅಂದು ಮನೆಯ ಆಪ್ತೇಷ್ಟರೆಲ್ಲಾ ಸೇರಿ ಮೃಷ್ಟಾನ್ನ ಭೋಜನ ಸವಿದು ಸಂತೋಷಿಸುತ್ತಾರೆ.


'ಸೂರ್ಯ ಪೊಂಗಲ್' ಸಂಕ್ರಾಂತಿಯ ದಿನ ನಡೆಯುವ ಹಬ್ಬ. ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಈ ದಿನ ಸೂರ್ಯನ ಪೂಜೆಗೆ ವಿಶೇಷ ಪ್ರಾಶಸ್ತ್ಯ. ಪೊಂಗಲ್ ಮತ್ತು ಕಬ್ಬಿನ ಜಲ್ಲೆಯನ್ನು ಸೂರ್ಯದೇವನಿಗೆ ನೈವೇದ್ಯ ಮಾಡುತ್ತಾರೆ. ಕರ್ನಾಟಕದಲ್ಲೂ ಈ ದಿನ ಹೆಣ್ಣು ಮಕ್ಕಳು ಹೊಸ ವಸ್ತ್ರ ಧರಿಸಿ, ಎಳ್ಳು ಬೀರಲು ಹೊರಡುತ್ತಾರೆ. ಗಂಡಸರು ಪೂಜೆ ಪುನಸ್ಕಾರ ಮಾಡಿ, ದೇವಾಲಯ ಸಂದರ್ಶಿಸುತ್ತಾರೆ. ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳು, ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಸಕ್ಕರೆ ಅಚ್ಚು, ಮುಂತಾದವುಗಳನ್ನು ಆಪ್ತೇಷ್ಟರಿಗೆಲ್ಲಾ ಹಂಚಿ, ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.


"ಎಳ್ಳು-ಬೆಲ್ಲ ಸವಿಯೋಣ, ಒಳ್ಳೆಯ ಮಾತನಾಡೋಣ" ಎಂದು ಶುಭಾಶಯ ಕೋರುತ್ತಾರೆ.


ಆಂಧ್ರದಲ್ಲಿ ಸಂಕ್ರಾಂತಿಯಂದು ವಿಶೇಷ ರೀತಿಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಈ ದಿನ ರಾಮ ರಾವಣನನ್ನು ಕೊಂದು ಸೀತೆಯನ್ನು ಬಂಧಮುಕ್ತಗೊಳಿಸಿದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದೂ ಹೇಳಲಾಗುತ್ತದೆ.


🚩 ಮಾಟ್ಟು ಪೊಂಗಲ್ 


 ‘ಮಾಟ್ಟು’ ಎಂದರೆ ‘ಪಶು’ ಎಂದರ್ಥ. ಸಂಕ್ರಾಂತಿಯ ಮರುದಿನ ಹಸು, ಎತ್ತು, ಎಮ್ಮೆ, ಕೋಣ ಮುಂತಾದ ಪಶುಗಳನ್ನು ಸಿಂಗರಿಸಿ ಪೂಜಿಸಿ, ತಿಂಡಿ ತಿನಿಸು ನೀಡುತ್ತಾರೆ. ಇಡೀ ವರ್ಷ ಮನೆಮಂದಿಗೆಲ್ಲಾ ಉಪಕಾರ ಮಾಡಿದ ದನಕರುಗಳಿಗೆ ಕೃತಜ್ಞನೆ ಸೂಚಿಸುವುದೇ ಈ ದಿನದ ಉದ್ದೇಶ. ಕೆಲವೆಡೆ ಹೋರಿ ಕಾಳಗ ನಡೆಸಿ ವಿನೋದೋತ್ಸವ ಆಚರಿಸುತ್ತಾರೆ. ಕೊಬ್ಬಿದ ಹಾಯುವ ಗೂಳಿಯ ಕೋಡಿಗೆ, ದುಡ್ಡಿನ ಚೀಲವನ್ನೊ, ಬೆಳ್ಳಿಯ ಆಭರಣವನ್ನೋ ಹಾಕಿ, ಜನ ಸಮೂಹದಲ್ಲಿ ನುಗ್ಗಿಸುತ್ತಾರೆ. ಧೈರ್ಯವುಳ್ಳ ಯುವಕರು ಆ ಗೂಳಿಯನ್ನು ತಡೆದು ಹಣ, ಆಭರಣ ಬಿಚ್ಚಿಕೊಂಡು ತಮ್ಮದಾಗಿಸಿಕೊಳ್ಳುತ್ತಾರೆ. ಹೊಸದಾಗಿ ಬಂದ ಅಕ್ಕಿ, ಧಾನ್ಯಗಳಿಂದ ಸಾಮೂಹಿಕ ಭೋಜನ ಏರ್ಪಡಿಸಿ ಸಂತೋಷ ಹಂಚಿಕೊಳ್ಳುತ್ತಾರೆ.


ಕರ್ನಾಟಕದಲ್ಲಿ ಸಂಕ್ರಾಂತಿ ಎಳ್ಳುಬೀರುವ ಹಬ್ಬದಂತೇ ಕಿಚ್ಚಿನ ಹಬ್ಬವೂ ಹೌದು. ಬೆಂಕಿಯ ಕಿಚ್ಚಿನ ಮೇಲೆ ದನಗಳನ್ನು ಹಾಯಿಸದೆ ಹಳೇ ಮೈಸೂರು ಭಾಗದ ಸಂಕ್ರಾಂತಿ ಮುಗಿಯುವುದಿಲ್ಲ. ರೈತಾಪಿ ವರ್ಗಕ್ಕೆ ಇದು ಸುಗ್ಗಿಯ ಹಬ್ಬ.  ಸಂಕ್ರಾಂತಿ ಹೊತ್ತಿಗೆ ರಾಗಿ ಹೊಲ ಕುರ್ಲಾಗಿ ಬಣವೆ ಒಟ್ಟುವ ಕೆಲಸ ಮುಗಿದಿರುತ್ತದೆ. ಹೊಲದಲ್ಲಿನ ರಾತ್ರಿ ಕುಯ್ಲು ಮುಗಿದಿದ್ದರೂ ಅಕಡಿ ಸಾಲಿನ ಅವರೆ ಗಿಡಗಳಲ್ಲಿ ಅವರೆಕಾಯಿ ಗೊಂಚಲು ತೂಗುತ್ತಾ ಬೀಗುತ್ತಿರುತ್ತವೆ. ಸಂಕ್ರಾಂತಿಯಂದು ಕಣದಲ್ಲಿನ ಬಣವೆ ಪೂಜೆ ಮಾಡಿ ಬೇಯಿಸಿದ ಅವರೆಕಾಯಿ, ಕಡಲೆಕಾಯಿ, ಗೆಣಸನ್ನು ಬಣವೆಗೆ ನೈವೇದ್ಯ ಇಡುವುದು ಹಳೇ ಮೈಸೂರು ಭಾಗದಲ್ಲಿರುವ ಪದ್ಧತಿ. ಇಲ್ಲಿ ಕಣದ ಪೂಜೆಯಾಗದೆ, ರಾಸುಗಳ ಕಿಚ್ಚು ಹಾಯದೆ ಸಂಕ್ರಾಂತಿ ಹಬ್ಬವಿಲ್ಲ.


ಹಗಲೆಲ್ಲಾ ಎಳ್ಳು, ಬೆಲ್ಲ, ಕಬ್ಬು, ಅವರೆ, ಗೆಣಸಿನ ಸವಿಯ ಜೊತೆಗೆ ಕಣದ ಪೂಜೆಯ ಸಂಭ್ರಮವಾದರೆ, ಹೊತ್ತು ಇಳಿಯುತ್ತಿದ್ದಂತೆ ಕಿಚ್ಚು ಹಾಯಿಸುವ ಸಡಗರ ರಂಗೇರುತ್ತದೆ. ಮನೆಯ ರಾಸುಗಳಿಗೆ ಸಿಂಗರಿಸಿ, ಹೊತ್ತು ಇಳಿಯುವುದನ್ನೇ ಕಾಯುತ್ತಿದ್ದಂತೆ ಹುಡುಗರ ಗುಂಪು ಬತ್ತದ ಹುಲ್ಲಿನ ಹೊರೆ ತಂದು ಕಿಚ್ಚು ಹಾಯಿಸಲು ಊರಿನ ಮುಂದೆ ತಯಾರಿ ನಡೆಸುತ್ತದೆ. ಹುಲ್ಲಿನ ರಾಶಿ ಮಾಡಿ ಕಿಚ್ಚು ಹೊತ್ತಿಸುತ್ತಿದ್ದಂತೆ ಏಳುವ ದೊಡ್ಡ ಬೆಂಕಿಯಲ್ಲಿ ಮೊದಲು ಹಾಯುವ ಜೋಡಿಗೆ ಗೆಲುವಿನ ಸಂಭ್ರಮ. ಕೆಲವೊಮ್ಮೆ ಕಿಚ್ಚು ಕಂಡು ಬೆದರಿ ಮೂಗುದಾರ ಕಿತ್ತುಕೊಂಡು ಕತ್ತಲಲ್ಲಿ ನಾಪತ್ತೆಯಾಗುವ ದನಕರುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಎಷ್ಟು ಹುಡುಕಿದರೂ ಸಿಗದ ದನಗಳು ಮಾರನೆಯ ದಿನದ ಹೊತ್ತಿಗೆ ಕೊಟ್ಟಿಗೆಯಲ್ಲಿ ಪ್ರತ್ಯಕ್ಷವಾಗಿರುತ್ತದೆ. ವರ್ಷವಿಡೀ ದುಡಿದ ರಾಸುಗಳನ್ನು ಸಂಕ್ರಾಂತಿಯಂದು ಸಿಂಗಾರ ಮಾಡುವ ಭೂತಾಯಿಯ ಮಗ ರಾಸುಗಳೊಂದಿಗೆ ಕಿಚ್ಚು ಹಾಯ್ದು ತಾನೂ ಬೆಚ್ಚಗಾಗುತ್ತಾನೆ. ಹೀಗೆ ಸಂಕ್ರಾಂತಿ ಕೇವಲ ಸೂರ್ಯ ಪಥ ಬದಲಿಸುವ ಸಂಕ್ರಮಣ ಪರ್ವ ಮಾತ್ರವಲ್ಲ, ಮಣ್ಣಿನ ಮಕ್ಕಳು ಕಿಚ್ಚು ಹಾಯ್ದು ಬೆಚ್ಚಗಾಗುವ ಹಬ್ಬವೂ ಹೌದು. ಕೆಲವೆಡೆ ಗಾಳಿಪಟ ಉತ್ಸವಗಳೂ ನಡೆಯುತ್ತವೆ. ಶ್ರೀರಂಗ ಪಟ್ಟಣದ 'ಆದಿರಂಗ' ಎಂದೇ ಹೆಸರಾದ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಹಲವು ದಶಕಗಳಿಂದ ಲಕ್ಷದೀಪೋತ್ಸವ ಆಚರಣೆ ನಡೆದುಕೊಂಡು ಬರುತ್ತಿದೆ. 'ದಕ್ಷಿಣಕಾಶಿ' ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯ ಪುಣ್ಯಕ್ಷೇತ್ರದಲ್ಲಿ ಸಂಕ್ರಾಂತಿ ದಿನದ ಮುಂಜಾನೆ ಬೆಟ್ಟದ ಶಿಖರದಲ್ಲಿ 'ಗಂಗೋತ್ಪತ್ತಿ' ಆಗುವುದು.


🚩 ಶಾಸ್ತ್ರ ದೃಷ್ಟಿಯಲ್ಲಿ - ಸಂಕ್ರಾಂತಿ


ನಿರ್ಣಯ ಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ: 


ತಸ್ಯಾಂ ಕೃಷ್ಣ ತಿಲೈಃ ಸ್ನಾನಂ ಕಾರ್ಯಂ ಚೋದ್ವರ್ತನಂ ಶುಭೈಃ | ತಿಲಾ ದೇಯಾಶ್ಚ ವಿಪ್ರೇಭ್ಯೋ ಸರ್ವದೇವೋತ್ತರಾಯಣೇ || ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃ ||


ಅಂದರೆ ಸಂಕ್ರಾಂತಿಯಂದು ಕರಿ ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳನ್ನು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು.


ಧರ್ಮಸಿಂಧುವಿನಲ್ಲಿ ಹೀಗೆ ಹೇಳಿದೆ :


ಸಂಕ್ರಾಂತೌ ಯಾನಿ ದತ್ತಾನಿ ಹವ್ಯ-ಕವ್ಯಾನಿ ದಾತೃಭಿಃ | ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ || ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾ ಶ್ಚೈವೋತ್ತರಾಯಣೇ ||


 ಅಂದರೆ ಉತ್ತರಾಯಣ ಪುಣ್ಯಕಾಲದಂದು ನಾವು ಮಾಡಿದ ದಾನ-ಧರ್ಮಗಳು, ಜನ್ಮ-ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಹೀಗೆ ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು ಹುರಿದು ಪುಡಿ ಮಾಡಿ ಬೆಲ್ಲ ಹಾಕಿ ಮಾಡಿದ ಚಿಗಳಿ ಅಪ್ಯಾಯಮಾನವಾಗಿರುತ್ತದೆ. ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ-ಮಾನ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ ಇಲ್ಲಿ ಎಳ್ಳು-ಬೆಲ್ಲ ಹಂಚುವುದು ಮನಸ್ಸಿನ ಕಹಿ ಭಾವನೆ ಮರೆತು, ಸಿಹಿ ಭಾವ ತುಂಬಿ ಅಮೃತಪುತ್ರರಾಗೋಣ ಎಂಬುದರ ದ್ಯೋತಕವಾಗಿದೆ.